ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲ್ಯಾಣ ನಿಗಮದ ಹಗರಣ ಆರೋಪ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ವಿರುದ್ಧ ಸರಣಿ ಆರೋಪಗಳು ಕೇಳಿ ಬರುತ್ತಿವೆ.
ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ದಾಸರಹಳ್ಳಿ ಬಿಜೆಪಿ ಶಾಸಕ ಎಸ್.ಮುನಿರಾಜು ಅವರು, ಅಗತ್ಯ ಮೂಲಸೌಕರ್ಯ ಕಾಮಗಾರಿಗಳಿಗೆ ಡಿಕೆ.ಶಿವಕುಮಾರ್ ಅವರಿಗೂ ಶೇ.8ರಷ್ಟು ತೆರಿಗೆ ಇದೆ ಎಂದು ಆರೋಪಿಸಿದರು.
ಶೇ.18ರಷ್ಟು ಜಿಎಸ್‌ಟಿ, ಶೇ.2ರಷ್ಟು ಸೆಸ್, ಶೇ.2ರಷ್ಟು ತೆರಿಗೆ ಮತ್ತು ಶೇ.8ರಷ್ಟು ಡಿಕೆಶಿ ತೆರಿಗೆ ವಿಧಿಸಲಾಗುತ್ತಿದೆ. 75 ಲಕ್ಷ ರೂಪಾಯಿ ಅನುದಾನದಲ್ಲಿ ಲಂಚಗಳಿಗೆ ಹಣ ಹೋದರೆ, ಅಭಿವೃದ್ಧಿಗೆ ಏನು ಉಳಿಯುತ್ತದೆ? ಎಂದು ಪ್ರಶ್ನಿಸಿದ್ದಾರೆ.ಈ ಹಿಂದೆ ರಾಜರಾಜೇಶ್ವರಿನಗರ ಶಾಸಕ ಎನ್ ಮುನಿರತ್ನ ಅವರು, ತಮ್ಮ ಕ್ಷೇತ್ರದ ಸುಮಾರು 126 ಕೋಟಿ ರೂ.ಗಳ ಅನುದಾನ ಮತ್ತು ಅಭಿವೃದ್ಧಿ ಹಣವನ್ನು ಕಡಿತಗೊಳಿಸಿ ಇತರ ಕ್ಷೇತ್ರಗಳಿಗೆ ನೀಡಲಾಗಿದೆ ಎಂದು ಆರೋಪಿಸಿದ್ದರು,
ಈ ವಿಚಾರವಾಗಿ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತಿದ್ದರು. ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು.
ಈ ನಡುವೆ ಬಿಜೆಪಿ ನಾಯಕರ ಶೇ.8ರಷ್ಟು ಡಿಕೆಶಿ ತೆರಿಗೆ ಕುರಿತು ಪ್ರತಿಕ್ರಿಯೆ ನೀಡಲು ಸಂಸದೆ ಶೋಭಾ ಕರಂದ್ಲಾಜೆಯವರು ನಿರಾಕರಿಸಿದ್ದಾರೆ.
ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ವಿಫಲವಾಗಿದೆ ಎಂದು ಹೇಳಿದರು.