ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆ: ನಾಗಸಂದ್ರ-ಮಾದಾವರ ಮಾರ್ಗ ಸೆಪ್ಟೆಂಬರ್ ಅಂತ್ಯದ ವೇಳೆಗೆ ಆರಂಭ!

ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆ: ನಾಗಸಂದ್ರ-ಮಾದಾವರ ಮಾರ್ಗ ಸೆಪ್ಟೆಂಬರ್ ಅಂತ್ಯದ ವೇಳೆಗೆ ಆರಂಭ!

Share

ಬೆಂಗಳೂರು: ನಿರ್ಣಾಯಕ ಮೂಲಸೌಕರ್ಯ ಮತ್ತು ಪರೀಕ್ಷಾ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲದ ಕಾರಣದಿಂದಾಗಿ ನಾಗಸಂದ್ರದಿಂದ ಮಾದಾವರವರೆಗಿನ ನಮ್ಮ ಮೆಟ್ರೋದ 3.7-ಕಿಮೀ ಹಸಿರುವ ಮಾರ್ಗ ವಿಸ್ತರಣೆಯ ವಾಣಿಜ್ಯ ಕಾರ್ಯಾಚರಣೆಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಾತ್ರ ಸಾಧ್ಯ ಎಂದು ಮೆಟ್ರೋ ಮೂಲಗಳು ತಿಳಿಸಿವೆ. ಈ ಹಿಂದೆ ಜುಲೈ ಅಂತ್ಯದ ವೇಳೆಗೆ ಕಾರ್ಯಾಚರಣೆ ಆರಂಭವಾಗಲಿದೆ ಎನ್ನಲಾಗಿತ್ತು.

298 ಕೋಟಿ ರೂ.ಗಳ ವೆಚ್ಚದ ಈ ಮಾರ್ಗವು ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ) ಮತ್ತು ಮಾದಾವರ (BIEC) ಮೂರು ನಿಲ್ದಾಣಗಳನ್ನು ಒಳಗೊಂಡಿದೆ. ಈ ಪೈಕಿ ಎರಡು ನಿಲ್ದಾಣಗಳು ಪೂರ್ಣಗೊಂಡಿದ್ದರೆ, ಮಾದಾವರದಲ್ಲಿ ಇನ್ನೂ ಕೆಲವು ಕೆಲಸಗಳು ನಡೆಯುತ್ತಿವೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (ಬಿಎಂಆರ್‌ಸಿಎಲ್) ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ‘ಎಲೆಕ್ಟ್ರಿಕಲ್ ಮತ್ತು ಸಿಗ್ನಲಿಂಗ್ ಅನ್ನು ಒಳಗೊಂಡಿರುವ ಸಿಸ್ಟಮ್ ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ. ಅವುಗಳನ್ನು ಸಿದ್ಧಪಡಿಸಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ. ರೈಲುಗಳನ್ನು ನಿರ್ವಹಿಸಲು ಶಕ್ತಿಯನ್ನು ಪೂರೈಸುವ ಥರ್ಡ್ ರೈಲು ಸಿದ್ಧವಾಗಬೇಕಾಗಿದೆ’ ಎಂದರು.

‘ಪರೀಕ್ಷೆಗಳನ್ನು ನಡೆಸಬೇಕು ಮತ್ತು ಕನಿಷ್ಠ 45 ದಿನಗಳ ಕಾಲ ಪ್ರಾಯೋಗಿಕ ರೈಲು ಸಂಚಾರ ನಡೆಸಬೇಕು. ಅದನ್ನು ಅನುಸರಿಸಿ, ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಅನುಮತಿ ನೀಡಬೇಕಾಗುತ್ತದೆ. ಹೀಗಾಗಿ, ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸೆಪ್ಟೆಂಬರ್ ಅಂತ್ಯದವರೆಗೆ ಕಾಯಬೇಕಾಗಬಹುದು’ ಎಂದು ಅವರು ಹೇಳಿದರು. ಮಾದಾವರ ನಿಲ್ದಾಣದಲ್ಲಿನ ಸಣ್ಣಪುಟ್ಟ ಕಾಮಗಾರಿಗಳನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಕೆಲವು ತಿಂಗಳ ಹಿಂದೆ TNIEಗೆ ಜುಲೈ ಅಂತ್ಯದ ವೇಳೆಗೆ ನಾಗಸಂದ್ರದಿಂದ ಮಾದಾವರದವರೆಗೆ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ ಎಂದು ಹೇಳಿದ್ದರು.ಈ ವಿಳಂಬಕ್ಕೆ ಕಾರಣಗಳ ಬಗ್ಗೆ ಕೇಳಿದಾಗ ಇನ್ನೊಬ್ಬ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿ, ‘ಸಂಸತ್ತಿನ ಚುನಾವಣೆಗಳು ಮತ್ತು ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದರಿಂದ ಖಂಡಿತವಾಗಿಯೂ ಪರಿಣಾಮ ಬೀರಿದೆ. ನಾವು ನಿರೀಕ್ಷಿಸಿದ ವೇಗದಲ್ಲಿ ಕಾಮಗಾರಿ ನಡೆದಿಲ್ಲ’ ಎಂದರು.

ಈ ಸಣ್ಣ ಮಾರ್ಗವು ಆಗಸ್ಟ್ 2019ರಲ್ಲಿಯೇ ಜನರ ಬಳಕೆಗೆ ಲಭ್ಯವಿರಬೇಕಿತ್ತು. ಆದರೆ, ಹಲವಾರು ಸಮಸ್ಯೆಗಳಿಂದ ಐದು ವರ್ಷ ತಡವಾಯಿತು. ಅಂಚೆಪಾಳ್ಯ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಹತ್ತಿರವಾಗಿಯೇ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು, ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್‌ನೊಂದಿಗಿನ ಒಪ್ಪಂದ ರದ್ದುಗೊಳಿಸಿದ್ದು, ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ನೈಸ್ ರಸ್ತೆಯ ಮೇಲೆ ಹಾದುಹೋಗಲು ಮಾರ್ಗಕ್ಕೆ ಅನುಮತಿ ನೀಡದಿರುವುದು ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಈ ಮಾರ್ಗದಲ್ಲಿ ಕಾಮಗಾರಿ ತುಂಬಾ ವಿಳಂಬವಾಯಿತು.

ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಈ ಮಾರ್ಗವು ಹೆಚ್ಚು ಸಹಾಯಕವಾಗಿದೆ ಮತ್ತು ಅದರ ಸಮೀಪದಲ್ಲಿಯೇ ನಿಲ್ದಾಣ ಹೊಂದಿರುತ್ತದೆ. ನೆಲಮಂಗಲ, ಮಾಕಳಿ ಮತ್ತು ಮಾದನಾಯಕನಹಳ್ಳಿ ನಿವಾಸಿಗಳು ಮತ್ತು ತುಮಕೂರಿನಿಂದ ಬೆಂಗಳೂರಿಗೆ ಪ್ರವೇಶಿಸುವವರು ಮಾದಾವರ ನಿಲ್ದಾಣದಲ್ಲಿ ರೈಲು ಹತ್ತಿ ನಗರದ ಹೃದಯಭಾಗಕ್ಕೆ ಸಂಪರ್ಕ ಹೊಂದಬಹುದು.


Share