ಬೆಂಗಳೂರು: ನಟ ದರ್ಶನ್ ಮತ್ತು ಅವರ ಆಪ್ತೆ ಪವಿತ್ರಾ ಗೌಡ ಅವರನ್ನು ಬಂಧಿಸಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಯಾರಿಗೂ ಸಾಫ್ಟ್ ಕಾರ್ನರ್ ತೋರಿಸುವ ಪ್ರಶ್ನೆಯೇ ಇಲ್ಲ. ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ ಸೋಮವಾರ ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊಲೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಅಥವಾ ಯಾರಿಗೂ ಸಾಫ್ಟ್ ಕಾರ್ನರ್ ತೋರಿಸುವ ಪ್ರಶ್ನೆಯೇ ಇಲ್ಲ. ಅಂತಹ ಯಾವುದೇ ವಿಷಯಗಳಿಗೆ ನಾವು ಮಣಿಯುವುದಿಲ್ಲ ಎಂದು ತಿಳಿಸಿದರು.
ಸೂಕ್ಷ್ಮ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ನಿರಾಕರಿಸಿದ ಗೃಹ ಸಚಿವರು, ತನಿಖೆಯ ನಂತರ ತನಿಖಾ ವರದಿಯನ್ನು ಹೊರತರಲಾಗುವುದು ಎಂದು ಹೇಳಿದರು.
ತನಿಖೆ ಯಾವಾಗ ಮುಗಿಯುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ತನಿಖಾ ತಂಡಕ್ಕೆ ಬಿಡಲಾಗಿದೆ. ಕಾನೂನು ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಪ್ರಾರಂಭಿಸಲಾಗುವುದು. ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೆ ಹೇಳಿದ್ದೇವೆ’ ಎಂದು ಅವರು ಹೇಳಿದರು
ತನಿಖಾ ತಂಡಕ್ಕೆ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಮರು ಸೇರ್ಪಡೆಗೊಳಿಸುವ ಕುರಿತು ಮಾತನಾಡಿದ ಗೃಹ ಸಚಿವರು, ಅಂತಹ ಬದಲಾವಣೆಗಳು ಆಡಳಿತಾತ್ಮಕ ಅವಶ್ಯಕತೆಗಳಿಗೆ ಒಳಪಟ್ಟಿರುತ್ತವೆ ಮತ್ತು ತನಿಖೆಯ ಭಾಗವಾಗಿ ಯಾರನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಪೊಲೀಸ್ ಇಲಾಖೆಗೆ ಬಿಡಲಾಗಿದೆ ಎಂದು ಹೇಳಿದರು.
ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ರವಾನಿಸಿದ ಆರೋಪದ ಮೇಲೆ ಜೂನ್ 8 ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ.