ಹೊನ್ನಾವರ: ತಾಲೂಕಿನ ಕರ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ (66) ಮೇಲೆ, ವಂದೂರು ಕ್ರಾಸ್ ನಲ್ಲಿ ಟಿಟಿ ವಾಹನ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗ್ರಾಮದ ದುಗ್ಗೂರಿನ ಜಟ್ಟು ಗೌಡನ ತಲೆಗೆ ತೀವ್ರ ಪೆಟ್ಟಾಗಿದ್ದು, ಆತನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿತ್ರದುರ್ಗ ಮೂಲದ 16 ಮಂದಿ ಟಿಟಿ ವಾಹನವೇರಿ ಮುರುಡೇಶ್ವರ, ಹೊನ್ನಾವರದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಕುಮಟಾ, ಗೋಕರ್ಣ ನೋಡಿ ವಾಪಾಸ್ ಊರಿನತ್ತ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ, ಎದುರಿನ ರಾಂಗ್ ರೂಟ್ ಮೂಲಕ ಬಂದ ಬೈಕ್ ಸವಾರ, ತನ್ನ ಮನೆಗೆ ತೆರಳಲು ಒಮ್ಮೆಂದೊಮ್ಮೆ ರಸ್ತೆ ಕ್ರಾಸ್ ಮಾಡಿದ್ದಾನೆ, ಬೈಕ್ ಸವಾರನ ಅಜಾಗ್ರುಕತೆ ಚಾಲನೆ ಈ ಅಪಘಾತ ಸಂಭವಿಸಲು ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈತನನ್ನು ತಪ್ಪಿಸಲು ಟಿಟಿ ವಾಹನದ ಚಾಲಕ ಸಾಕಷ್ಟು ಪ್ರಯತ್ನ ಪಟ್ಟರೂ ಬೈಕ್ ಟಿಟಿ ವಾಹನದ ಮುಂಭಾಗದ ಎಡಬದಿಯಲ್ಲಿ ರಭಸದಿಂದ ಗುದ್ದಿದ್ದು ಕಂಡುಬರುತ್ತಿದೆ. ಟಿಟಿ ಚಾಲಕ ಅಪಘಾತ ತಪ್ಪಿಸಲು ಬಲಕ್ಕೆ ತಿರುಗಿಸಿರುವುದರಿಂದ ಟಿಟಿ ವಾಹನ ರಸ್ತೆ ನಡುವಿನ ವಿಭಾಜಕಕ್ಕೆ, ಸುಮಾರು ದೂರದ ತನಕವೂ ಸವರಿಕೊಂಡು ಬಂದಿದ್ದು ಕಂಡುಬರುತ್ತಿದೆ. ಪ್ರವಾಸಕ್ಕೆ ಬಂದ ಈ ಟಿಟಿ ವಾಹನದಲ್ಲಿ 8 ಜನ ಮಹಿಳೆಯರು, ತಾವು ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದೆವು ಎಂದು ಅವರಲ್ಲಿ ಒಬ್ಬರು ಬೆಳಕು ಗೆ ಮಾಹಿತಿ ನೀಡಿದ್ದಾರೆ. ಅಪಘಾತ ನಡೆದು ಒಂದು ಗಂಟೆ ಕಳೆದರೂ ಸ್ಥಳಕ್ಕೆ ಪೋಲಿಸರು ಬರದೆ ಇರುವುದರಿಂದ ಒಂದು ಬದಿಯ ಹೆದ್ದಾರಿ ಗಂಟೆಗಳ ತನಕ ಬಂದ್ ಆಗಿದ್ದು ಕಂಡು ಬಂದಿದೆ. ಆಂಬ್ಯುಲೆನ್ಸ್ ಸಹ ಬರದೇ ಗಾಯಗೊಂಡ ವ್ಯಕ್ತಿಯನ್ನು ಬೇರೆ ವಾಹನದ ಮೇಲೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.