ಭಾರತದ ಮಧ್ಯಮವರ್ಗದ ಜನತೆಯ ಬಳಿ ಹಿಂದೆಂದಿಗಿಂತ ಇಂದು ಹೆಚ್ಚಿನ ಹಣದ ಹರಿವು ಹೆಚ್ಚಾಗಿದೆ. ಗಳಿಸಿದ ಹಣದಲ್ಲಿ ಖರ್ಚು ಮಾಡಿ ಕೂಡ ಒಂದಷ್ಟು ಹಣ ಉಳಿಯುತ್ತಿದೆ. ಹೀಗೆ ಉಳಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಚಿಂತನೆ ಈ ವರ್ಗದ ಜನರಲ್ಲಿ ಹೆಚ್ಚಾಗುತ್ತಿದೆ.
ಇದಕ್ಕೆ ಪ್ರಮುಖ ಕಾರಣ ಬ್ಯಾಂಕು ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ನೀಡುತ್ತಿರುವ ಬಡ್ಡಿಯ ಪ್ರಮಾಣ ಹಣದುಬ್ಬರವನ್ನು ಕೂಡ ಮೀರಿಸುವಂತಿಲ್ಲ. ಹೀಗಾಗಿ ಪ್ರತಿ ದಿನವೂ ನಮ್ಮ ಹಣ ಕುಸಿತವನ್ನು ಕಾಣುತ್ತಿದೆ. ಅರ್ಥ ಹಣದ ಖರೀದಿ ಶಕ್ತಿಯಲ್ಲಿ ಕುಸಿತವಾಗುತ್ತಿದೆ. ಇದನ್ನು ಒಂದು ಉದಾಹರಣೆ ಮೂಲಕ ನೋಡೋಣ. ನಮ್ಮ ಬಳಿ ಉಳಿದ ನೂರು ರೂಪಾಯಿ ಹಣವನ್ನು ಬ್ಯಾಂಕಿನಲ್ಲಿ ಇಟ್ಟರೆ ಮುಂದಿನ ವರ್ಷಕ್ಕೆ ಅದು ಆರೂವರೆ ಪ್ರತಿಶತ ಬಡ್ಡಿಯ ಪ್ರಕಾರ 106.50 ಪೈಸೆ ಆಗುತ್ತದೆ.
ಹಣದುಬ್ಬರ ಸಮಾಜದಲ್ಲಿ ಎರಡಂಕಿಯನ್ನು ದಾಟಿದೆ. ಸರಕಾರ ಬಿಡುಗಡೆ ಮಾಡುವ ಅಂಕಿ-ಅಂಶದಂತೆ ಮಾರುಕಟ್ಟೆಯಲ್ಲಿ ಹಣದುಬ್ಬರವಿಲ್ಲ , ಅದಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಹಣದುಬ್ಬರವನ್ನು ನಾವು 11ಪ್ರತಿಶತ ಎಂದು ಕೊಂಡರೂ, ಕಳೆದ ವರ್ಷ ನೂರು ರುಪಾಯಿಗೆ ಸಿಗುತ್ತಿದ್ದ ವಸ್ತುವನ್ನು ಕೊಳ್ಳಲು ಈ ವರ್ಷ 111 ರೂಪಾಯಿ ಬೇಕು. ಬ್ಯಾಂಕಿನಲ್ಲಿಟ್ಟ ಹಣ ನಿಮಗೆ ಕೊಟ್ಟದ್ದು 106.50, ಹೀಗಾಗಿ 4.50 ಹಣ ತನ್ನ ಮೌಲ್ಯವನ್ನು ಕಳೆದು ಕೊಂಡಿತು. ಹೀಗಾಗಿ ಇದಕ್ಕಿಂತ ಹೆಚ್ಚಿನ ಹಣವನ್ನು ನಾವು ಗಳಿಸಿಕೊಳ್ಳಲು ಬೇರೆ ಹೂಡಿಕೆಯನ್ನು ನಾವವು ಅವಲಂಬಿಸಬೇಕಾದ ಪರಿಸ್ಥಿತಿ ಏರ್ಪಟ್ಟಿದೆ.ಷೇರು ಮಾರುಕಟ್ಟೆ ಅಂತಹ ಒಂದು ಮಾರ್ಗವನ್ನು ಕಲ್ಪಿಸಿಕೊಟ್ಟಿದೆ. ಆದರೆ ಷೇರು ಮಾರುಕಟ್ಟೆಯ ಬಗ್ಗೆ ಜನರಲ್ಲಿ ಒಂದು ರೀತಿಯ ಭಯ ಆವರಿಸಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳಲು ಭಯ ಮತ್ತು ದುರಾಸೆ ಪ್ರಮುಖ ಕಾರಣಗಳಾಗಿವೆ. ಭಯ ಎಂದರೆ ವಿಷಯ ಜ್ಞಾನದ ಕೊರತೆ. ಹೀಗಾಗಿ ಹೆಚ್ಚು ವಿಷಯವನ್ನು ತಿಳಿದುಕೊಳ್ಳುವುದರಿಂದ ಭಯ ನಿವಾರಣೆಯಾಗುತ್ತದೆ.
ಮಾರುಕಟ್ಟೆಯಲ್ಲಿ ಹಲವಾರು ಬ್ರೋಕಿಂಗ್ ಸಂಸ್ಥೆಗಳು ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗೆ ಬೇಕಾದ ಸೇವೆಯನ್ನು ನೀಡುತ್ತಿವೆ. ಯಾವ ಸಂಸ್ಥೆಯನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದಕ್ಕೆ ಹಲವಾರು ಅಂಶಗಳನ್ನು ಗಮನಿಸಬೇಕಾಗುತ್ತದೆ. ಅದರಲ್ಲಿ ಪ್ರಮುಖವಾದದ್ದು ಅವರು ಹಾಕುವ ಸೇವಾ ಶುಲ್ಕ ಅಥವಾ ಬ್ರೋಕರೇಜ್ ಎಷ್ಟು ಎನ್ನುವುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಬ್ರೋಕರೇಜ್ ಸಂಸ್ಥೆಗಳ ಸಹ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಶುಲ್ಕವನ್ನು ವಿಧಿಸುತ್ತಿವೆ.
ಬೋರ್ಕರೇಜ್ ಸಂಸ್ಥೆ ಮುಳುಗಿ ಹೋದರೆ ನಮ್ಮ ಹಣದ ಗತಿಯೇನು?
ಉಳಿದಂತೆ ಅತಿ ಸಾಮಾನ್ಯವಾಗಿ ಹೂಡಿಕೆದಾರರಲ್ಲಿ ಅದರಲ್ಲೂ ಪ್ರಥಮ ಬಾರಿಗೆ ಹೂಡಿಕೆ ಮಾಡುವವರಲ್ಲಿ ಒಂದು ಸಂಶಯ ಸದಾ ಕಾಡುತ್ತಿರುತ್ತದೆ. ನಾವು ಹೂಡಿಕೆ ಮಾಡಿರುವ ಬೋರ್ಕರೇಜ್ ಸಂಸ್ಥೆ ನಾಳೆ ಮುಳುಗಿ ಹೋದರೆ ನಮ್ಮ ಹಣದ ಗತಿಯೇನು ? ನಮ್ಮ ಬ್ರೋಕರ್ ಏನಾದರೂ ತಪ್ಪು ಟ್ರೇಡಿಂಗ್ ಪ್ರಾಕ್ಟೀಸ್ ನಲ್ಲಿ ತೊಡಗಿಕೊಂಡು ಸಂಸ್ಥೆಯ ಲೈಸನ್ಸ್ ರದ್ದಾದರೆ ನಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ ? ನಮ್ಮ ಹೂಡಿಕೆ ಭದ್ರವೇ ಎನ್ನುವುದು ಸಹಜವಾಗಿ ಉತ್ಪನ್ನವಾಗುವ ಪ್ರಶ್ನೆ. ನಮ್ಮ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಆಡಳಿತ ಮಂಡಳಿಯಿಂದ ಆದ ತಪ್ಪಿನಿಂದ ಸಾವಿರಾರು ಗ್ರಾಹಕರು ತಮ್ಮ ಹಣವನ್ನು ಮುಟ್ಟಲಾಗದ ಪರಿಸ್ಥಿತಿ ಬಂದಿದೆ. ಇಂತಹ ವಿಷಯಗಳು ಜನರ ಜಂಘಾಬಲವನ್ನು ಹುಡುಗಿಸಿ ಬಿಡುತ್ತವೆ. ಕಷ್ಟ ಪಟ್ಟು ದುಡಿದ ಹಣ ಎಲ್ಲಾದರೂ ಹೀಗೆ ಸಿಕ್ಕಿ ಹಾಕಿಕೊಂಡರೆ ಹೇಗೆ ? ಹೆಚ್ಚಿನ ದುಡ್ಡಿನ ಆಸೆಗೆ ಮೂಲ ಧನವನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದ್ದೆ ಎನ್ನುವ ಭಯದಿಂದ ಜನರು ಷೇರು ಮಾರುಕಟ್ಟೆಯ ಹೂಡಿಕೆಯಿಂದ ದೂರ ಹೋಗುತ್ತಿದ್ದಾರೆ.
ನಾವು ಅರಿಯಬೇಕಿರುವ ನೈಜ ಅಂಶಗಳು!
ಆದರೆ ನಿಜವಾದ ವಿಷಯ ಬೇರೆಯದಿದೆ . ನೀವು ಹೂಡಿಕೆ ಮಾಡಿದ ಹಣ ಅದು ನೇರವಾಗಿ ಷೇರುಗಳಲ್ಲಿ ಅಥವಾ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದ್ದರೆ ಅದು ನೀವು ಯಾವ ಬ್ರೋಕಿಂಗ್ ಸಂಸ್ಥೆಯ ಮೂಲಕ ಹೂಡಿಕೆ ಮಾಡಿದ್ದೀರಿ ಅವರ ಹೆಸರಿನಲ್ಲಿ ಇರುವುದಿಲ್ಲ. ಅದು ಹೂಡಿಕೆದಾರನ ಹೆಸರಿನಲ್ಲಿ ಇರುತ್ತದೆ. ನಾವು ಹೂಡಿಕೆ ಮಾಡಿದ ಷೇರುಗಳು ನಮ್ಮ ಹೆಸರಿನಲ್ಲಿ NSDL ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ ಮತ್ತು CDSL ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ ಲಿಮಿಟೆಡ್ ಎನ್ನುವ ಎರಡು ಸಂಸ್ಥೆಗಳಲ್ಲಿ ಇರುತ್ತದೆ. ಅಂದರೆ ಗಮನಿಸಿ ನಮ್ಮ ಬ್ರೋಕಿಂಗ್ ಸಂಸ್ಥೆ ನಮ್ಮ ಪರವಾಗಿ ಟ್ರೇಡ್ ಮಾಡುತ್ತದೆ , ಆದರೆ ಅದು ನಮ್ಮ ಷೇರುಗಳ , ನಮ್ಮ ಹಣದ , ಹೂಡಿಕೆಯ ಮಾಲೀಕರಲ್ಲ. ಅವರು ನಮಗೆ ನೀಡುವ ಸೇವೆಗೆ ಒಂದಷ್ಟು ಬ್ರೋಕರೇಜ್ ಪಡೆದುಕೊಳ್ಳುತ್ತಾರೆ ವಿನಃ ಅವರಿಗೆ ಬೇರಾವ ಅಧಿಕಾರವೂ ಇರುವುದಿಲ್ಲ. ಹೀಗಾಗಿ ಬ್ರೋಕಿಂಗ್ ಸಂಸ್ಥೆ ಯಾವುದೇ ಕಾರಣದಿಂದ ಮುಚ್ಚಿದರೆ ಹೂಡಿಕೆದಾರರು ಹೆದರುವ ಅವಶ್ಯಕತೆಯಿಲ್ಲ. ನಾವು ಸುಲಭವಾಗಿ ಹೇಗೆ ನಮ್ಮ ಮೊಬೈಲ್ ಫೋನ್ ಸಿಮ್ ಪೋರ್ಟ್ ಮಾಡಿಕೊಳ್ಳುತ್ತೇವೆ ಹಾಗೆ ಬೇರೊಂದು ಬ್ರೋಕಿಂಗ್ ಸಂಸ್ಥೆಯಲ್ಲಿ ಡಿಮ್ಯಾಟ್ ಅಕೌಂಟ್ ತೆರೆದು ಅಲ್ಲಿಗೆ ನಮ್ಮ ಎಲ್ಲಾ ಷೇರುಗಳನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಇದರಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಮೊದಲೇ ಹೇಳಿದಂತೆ ಬ್ರೋಕಿಂಗ್ ಸಂಸ್ಥೆ ಕೇವಲ ಸರ್ವಿಸ್ ಪ್ರೊವೈಡರ್ , ಅವರು ನಮ್ಮ ಹೂಡಿಕೆಯ , ಷೇರುಗಳ ಮಾಲೀಕರಲ್ಲ. ಹೀಗಾಗಿ ಸಂಸ್ಥೆ ಮುಚ್ಚಿದರೆ ನಾವು ಇನ್ನೊಂದು ಸಂಸ್ಥೆಯಲ್ಲಿ ಸೇವೆಯನ್ನು ಪಡೆದುಕೊಳ್ಳಬಹುದು , ನಮ್ಮ ಹಣ , ಹೂಡಿಕೆ ಅಭಾದಿತ.
NSDL ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ ನಲ್ಲಿ NSE ಯಲ್ಲಿ ನೋದಾವಣಿಯಾಗಿರುವ ಷೇರುಗಳು ಇರುತ್ತವೆ, ಹಾಗೆ CDSL ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ ಲಿಮಿಟೆಡ್ ನಲ್ಲಿ BSE ಯಲ್ಲಿ ನೊಂದಾವಣಿಯಾಗಿರುವ ಷೇರುಗಳು ಇರುತ್ತವೆ. ಅಂದರೆ ನಾವು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಹೂಡಿಕೆ ಮಾಡಿದ ಷೇರುಗಳು ನಮ್ಮ ಹೆಸರಿನಲ್ಲಿ CDSL ನಲ್ಲಿ ಇರುವ ನಮ್ಮ ಡಿಮ್ಯಾಟ್ ಅಕೌಂಟ್ ನಲ್ಲಿರುತ್ತದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಖರೀದಿ ಮಾಡಿದ ಷೇರುಗಳು ಹೂಡಿಕೆದಾರರ ಹೆಸರಿನಲ್ಲಿ NSDL ನಲ್ಲಿರುವ ಡಿಮ್ಯಾಟ್ ಅಕೌಂಟ್ನಲ್ಲಿರುತ್ತದೆ. ಹೀಗಾಗಿ ಡಿಮ್ಯಾಟ್ ಅಕೌಂಟ್ ನಾವು ಯಾವುದೇ ಬ್ರೋಕಿಂಗ್ ಸಂಸ್ಥೆಯ ಮೂಲಕ ಓಪನ್ ಮಾಡಿದ್ದರೂ ಕೂಡ ಅದು ಈ ಎರಡು ಸಂಸ್ಥೆಗಳ ಡಿಪಾಸಿಟರಿಯಲ್ಲಿರುತ್ತದೆ ಹೊರತು ಅದು ಯಾವುದೇ ಬ್ರೋಕಿಂಗ್ ಸಂಸ್ಥೆಗೆ ಸೇರಿರುವುದಿಲ್ಲ. ಹೀಗಾಗಿ ನಮ್ಮ ಡಿಮ್ಯಾಟ್ ಖಾತೆ ಮತ್ತು ನಮ್ಮ ಹೂಡಿಕೆ ಎರಡೂ ಸುರಕ್ಷಿತ.
NSDL 1996ರಲ್ಲಿ ಮತ್ತು CSDL 1999ರಲ್ಲಿ ಷೇರು ಮಾರುಕಟ್ಟೆಯಲ್ಲಿ ಆಗುವ ಅವವ್ಯಹಾರವನ್ನು ತಡೆಗಟ್ಟುವ ಸಲುವಾಗಿ ತೆರೆಯಲಾಗಿದೆ. ಸ್ಟಾಕ್ ಎಕ್ಸ್ಚೇಂಜ್ ಇವುಗಳ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುತ್ತದೆ. ಭಾರತ ಸರಕಾರದ ಡೆಪಾಸಿಟರಿ ಆಕ್ಟ್ ಪ್ರಕಾರ ಇದನ್ನು ಜಾರಿಗೆ ತರಲಾಗಿದೆ. ಇಷ್ಟೆಲ್ಲಾ ಇದ್ದು ಕೂಡ ಕಾರ್ವಿ ಎನ್ನುವ ಬ್ರೋಕಿಂಗ್ ಸಂಸ್ಥೆ ಹೂಡಿಕೆದಾರರ ಹಣವನ್ನು ದುರ್ಬಳಕೆ ಮಾಡಿಕೊಂಡಿತ್ತು. ಅದು ಗ್ರಾಹಕರ ಹಣವನ್ನು ಪ್ಲೆಡ್ಜ್ ಮಾಡಿ ತನಗೆ ಬೇಕಾದ ಮಾರ್ಜಿನ್ ಪಡೆದುಕೊಂಡು ಅದನ್ನು ತನ್ನ ಹಿತಾಸಕ್ತಿಗೆ ಬಳಸಿಕೊಂಡಿತ್ತು. ಅದರ ನಂತರ ಸ್ಟಾಕ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಕಾನೂನನ್ನು ಬಲಪಡಿಸಿದೆ. ನಮ್ಮ ಎಲ್ಲಾ ಷೇರುಗಳು ನಮ್ಮ ಡಿಮ್ಯಾಟ್ ಅಕೌಂಟ್ ನಲ್ಲಿರುತ್ತದೆ. ಅದನ್ನು ಬೇರೆ ಕಡೆಗೆ ವರ್ಗಾಯಿಸಿದೆ ತಕ್ಷಣ NSDL ಅಥವಾ CDSL ಹೂಡಿಕೆದಾರನಿಗೆ ಸಂದೇಶ ಕಳಿಸುತ್ತದೆ. ಯಾವುದೇ ಕಾರಣಕ್ಕೂ ನಮ್ಮ ಷೇರು ನಮ್ಮ ಡಿಮ್ಯಾಟ್ ಅಕೌಂಟ್ ಬಿಟ್ಟು ಬೇರೆ ಕಡೆಗೆ ಹೋಗುವಂತಿಲ್ಲ. ಹಾಗೊಮ್ಮೆ ಹೋದರೆ ಅದು ಬ್ರೋಕಿಂಗ್ ಸಂಸ್ಥೆ ಮಾಡುತ್ತಿರುವ ಮೋಸ ಎಂದಾಗುತ್ತದೆ. ಹೀಗಾಗಿ ನಿತ್ಯವೂ ಬರುವ ಇಮೇಲ್ ಸಂದೇಶವನ್ನು ನೋಡುವುದು ತಪ್ಪಿಸಬಾರದು. ಇಂದಿನ ಕಾಲಘಟ್ಟದಲ್ಲಿ ಕಾರ್ವಿ ಬ್ರೋಕಿಂಗ್ ಸಂಸ್ಥೆ ಮಾಡಿದ ರೀತಿಯ ಮೋಸವನ್ನು ಮಾಡುವುದು ಸುಲಭವಲ್ಲ. ಇಂದು ಹೂಡಿಕೆದಾರನ ಹಿತರಕ್ಷಣೆ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಕೊನೆ ಮಾತು: ಅಪಾಯವಿಲ್ಲದ ಹೂಡಿಕೆ ಇಲ್ಲ. ನಾವು ಅತಿ ಸುರಕ್ಷಿತ ಎಂದು ಭಾವಿಸಿರುವ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಕೂಡ ಐದು ಲಕ್ಷದ ವರೆಗೆ ಮಾತ್ರ ಸುರಕ್ಷಿತ. ನಂತರದ ಹಣಕ್ಕೆ ಯಾವ ಸುರಕ್ಷತೆ ಇಲ್ಲ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಹಣ ಕೂಡ ಅಪಾಯದಿಂದ ಹೊರತಲ್ಲ. ವೃತ್ತಿಪರರ ಸಹಾಯದಿಂದ ಹೂಡಿಕೆ ಮಾಡಿದಾಗ ಅಪಾಯ ಕಡಿಮೆಯಾಗುತ್ತದೆ. ಇದರ ಜೊತೆಗೆ ಇನ್ವೆಸ್ಟ್ಮೆಂಟ್ ಇನ್ಶೂರೆನ್ಸ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಷೇರು ಮಾರುಕಟ್ಟೆಯಲ್ಲಿ , ಮತ್ತು ಬ್ರೋಕಿಂಗ್ ಸಂಸ್ಥೆಯ ತಪ್ಪುಗಳಿಂದ ಆಗಬಹುದಾದ ನಷ್ಟಕ್ಕೆ ನಾವು ವಿಮೆಯನ್ನು ಪಡೆದುಕೊಳ್ಳಬಹುದು. ಹಾಗೊಮ್ಮೆ ಎಲ್ಲವೂ ಸರಿಯಾಗಿದ್ದು ವಿಮೆ ಪಡೆದುಕೊಳ್ಳುವ ಪ್ರಮೇಯ ಬರದೇ ಹೋದರೆ ವಿಮೆಯ ಅವಧಿಯ ನಂತರ ನಾವು ನೀಡಿದ್ದ ಹಣ ಕೂಡ ಒಂದಷ್ಟು ಬೆಳೆದು ನಮ್ಮ ಕೈಸೇರುತ್ತದೆ. ಭಯ ಮತ್ತು ಸಂದೇಹ ನಿವಾರಣೆ ಮಾಡಿಕೊಂಡು ಮುಂದಕ್ಕೆ ನಡೆಯುವುದು ಜಾಣತನ. ಅಪಾಯ ಎಂದು ಕಾರ್ಯತತ್ಪರರಾಗದೆ ಕುಳಿತರೆ ಅದಕ್ಕಿಂತ ದೊಡ್ಡ ಅಪಾಯ ಬೇರೊಂದಿಲ್ಲ.