NDA ಸರ್ಕಾರದಲ್ಲಿ ಮೋದಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲಾಗದೇ? ಈ ವಾದದಲ್ಲಿ ಹುರುಳಿದೆಯೇ? (ತೆರೆದ ಕಿಟಕಿ)

NDA ಸರ್ಕಾರದಲ್ಲಿ ಮೋದಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲಾಗದೇ? ಈ ವಾದದಲ್ಲಿ ಹುರುಳಿದೆಯೇ? (ತೆರೆದ ಕಿಟಕಿ)

Share

ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಒಂದೇ ಪಕ್ಷಕ್ಕೆ ಬಹುಮತ ಇದ್ದ ಸ್ಥಿತಿಯನ್ನು ನೋಡಿ ಅಭ್ಯಾಸವಾಗಿತ್ತು. ಹೀಗಾಗಿ, ಈ ಬಾರಿ ಬಿಜೆಪಿ 240ಕ್ಕೆ ಸೀಮಿತಗೊಂಡು, 272 ಎಂಬ ಮ್ಯಾಜಿಕ್ ಸಂಖ್ಯೆ ಕಾಪಾಡಿಕೊಳ್ಳುವುದಕ್ಕೆ ಎನ್ ಡಿ ಎ ಮೈತ್ರಿಕೂಟವನ್ನು ಸರಿಯಾಗಿ ಇಟ್ಟುಕೊಳ್ಳಬೇಕೆಂಬ ಸ್ಥಿತಿ ಉದ್ಭವಿಸಿದಾಗ ಸಹಜವಾಗಿಯೇ ಅದರ ಸುತ್ತ ಥರಾವರಿ ಚರ್ಚೆಗಳು ಹುಟ್ಟಿಕೊಂಡವು. ಈ ಬಾರಿಯದ್ದು ಮೋದಿ ಸರ್ಕಾರವಲ್ಲ, ಎನ್ ಡಿ ಎ ಸರ್ಕಾರಎಂಬ ವ್ಯತ್ಯಾಸವನ್ನು ಹಲವರು ಎತ್ತಿಹಿಡಿದರು.

ಇದುವರೆಗೆ ಏಕಪಕ್ಷೀಯ ಬಹುಮತ ಹೊಂದಿದ್ದ ಸರ್ಕಾರವನ್ನು ಮುನ್ನಡೆಸಿದ್ದ ನರೇಂದ್ರ ಮೋದಿ ಈ ಅವಧಿಯಲ್ಲಿ ತಮಗೆ ಬೇಕಾದ ನಿರ್ಣಯ ಕೈಗೊಳ್ಳಬಲ್ಲರೇ? ಈ ಹಿಂದೆ ದಳ ಬದಲಿಸಿರುವ ನಿತೀಶ ಕುಮಾರ್ ಅವರ ಬ್ಲಾಕ್ಮೇಲ್ ನ್ನು ಅಡಿಗಡಿಗೆ ಎದುರಿಸಬೇಕಾಗುತ್ತದೆಯೇ? ಅದೊಮ್ಮೆ ಎನ್ ಡಿ ಎ ತೊರೆದಿದ್ದ ಚಂದ್ರಬಾಬು ನಾಯ್ಡು ಎಷ್ಟು ವಿಶ್ವಾಸಾರ್ಹರು ಎಂಬೆಲ್ಲ ಪ್ರಶ್ನೆಗಳು ಲೋಕಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಎದ್ದವು. ಆದರೆ, ಜೂನ್ 9ಕ್ಕೆ ಪ್ರಮಾಣವಚನ ಕಾರ್ಯಕ್ರಮ ಸಂಪನ್ನಗೊಂಡ ನಂತರ ಹಾಗೂ ರಕ್ಷಣೆ, ಗೃಹ, ವಿತ್ತ ಸಚಿವಾಲಯ ಸೇರಿದಂತೆ ಪ್ರಮುಖ ಖಾತೆಗಳನ್ನು ಬಿಜೆಪಿಯೇ ಇಟ್ಟುಕೊಂಡು ನಿರಂತರತೆ ಕಾಯ್ದುಕೊಳ್ಳುವ ಸೂಚನೆಗಳು ಸಿಕ್ಕಿರುವುದರಿಂದ ಕೆಲವು “ಕಿಚಡಿ ಆತಂಕ”ಗಳಿಗೆ ಅದಾಗಲೇ ಉತ್ತರ ಸಿಕ್ಕಂತಾಗಿಬಿಟ್ಟಿದೆ.

ಅದಿರಲಿ..ಐತಿಹಾಸಿಕವಾಗಿ ನೋಡಿದಾಗಲೂ ಈಗಿನ ಮೋದಿ ಪ್ರಣೀತ ಬಿಜೆಪಿಗಿಂತ ಕಡಿಮೆ ಸ್ಥಾನಗಳನ್ನು ಹೊಂದಿ ಸರ್ಕಾರ ನಡೆಸಿದ್ದವರೆಲ್ಲ ದೇಶದ ಪಥವೇ ಬದಲಾಗುವಂಥ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವುಗಳನ್ನು ಒಮ್ಮೆ ಅವಲೋಕಿಸಿಕೊಂಡುಬಂದರೆ ನಮ್ಮಲ್ಲೊಂದು ಹೊಸ ನೋಟ ಮತ್ತು ಹೊಸ ವಿಶ್ವಾಸ ಮೂಡುವುದರಲ್ಲಿ ಸಂದೇಹವಿಲ್ಲ. ಪಿ ವಿ ನರಸಿಂಹ ರಾವ್ ಪ್ರಧಾನಿಯಾಗಿದ್ದು ಜೂನ್ 1991ರಲ್ಲಿ. 232 ಸ್ಥಾನಗಳನ್ನು ಮಾತ್ರ ಹೊಂದಿದ್ದ ಮೈನಾರಿಟಿ ಸರ್ಕಾರ ಅದಾಗಿತ್ತು. ಸಣ್ಣ ಸಣ್ಣ ಪಕ್ಷಗಳ ಬಾಹ್ಯ ಬೆಂಬಲದಲ್ಲಿ ಸರ್ಕಾರ ನಿಂತಿತ್ತಷ್ಟೆ. ಅಷ್ಟಾಗಿಯೂ ಅವತ್ತಿಗೆ ಭಾರತದ ಅರ್ಥವ್ಯವಸ್ಥೆಯನ್ನು ಲೈಸೆನ್ಸ್-ಪರ್ಮಿಟ್ ಯುಗದಿಂದ ಮಾರುಕಟ್ಟೆ ಪ್ರಣೀತವಾಗಿಸುವ ಆರ್ಥಿಕ ಉದಾರೀಕರಣದ ಅತಿದೊಡ್ಡ ನಿರ್ಧಾರವನ್ನು ಅನುಷ್ಠಾನಗೊಳಿಸುವುದಕ್ಕೆ ರಾವ್ ಹಿಂದಡಿ ಇಡಲಿಲ್ಲ.

ಅವತ್ತಿಗೆ ದೇಶದ ಸ್ಥಿತಿಯಾದರೂ ಹೇಗಿತ್ತು? ಅದಕ್ಕೂ ಹಿಂದಿನ ಚಂದ್ರಶೇಖರ ಸರ್ಕಾರವು ವಿದೇಶಿ ಪಾವತಿಗಳಿಗೆ ಡಾಲರ್ ಸಂಗ್ರಹ ಇರದೇ 67 ಟನ್ ಬಂಗಾರವನ್ನು ಐಎಂಎಫ್ ಬಳಿ ಅಡವಿಟ್ಟು ಬಂದಿತ್ತು. ಸ್ವಾತಂತ್ರ್ಯಾನಂತರ ಆವರೆಗೂ ಪಾಲಿಸಿಕೊಂಡುಬಂದಿದ್ದ ಸಮಾಜವಾದಿ ನೀತಿಗಳು ದೇಶವನ್ನು ಆರ್ಥಿಕ ಅಧೋಗತಿಗೆ ತಳ್ಳಿದ್ದವು.

ಈ ಸ್ಥಿತಿ ಸುಧಾರಿಸುವುದಕ್ಕೆ ರಾವ್ ಹಲವು ಆರ್ಥಿಕ ಉದಾರೀಕರಣದ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾರಂಭಿಸಿದರು. ಉತ್ಪಾದಕತೆ ಇಲ್ಲದೇ ಜಡ್ಡುಗಟ್ಟಿದ್ದ ಸರ್ಕಾರಿ ಉದ್ಯಮಗಳ ಖಾಸಗೀಕರಣ, ವಿದೇಶಿ ಕಂಪನಿಗಳು ಭಾರತದಲ್ಲಿ ಉದ್ಯಮ ಸ್ಥಾಪಿಸಲು ಅವಕಾಶ, ಸರ್ಕಾರಕ್ಕೆ ಹತ್ತಿರವಿದ್ದ ಕೆಲವರಷ್ಟೇ ಲೈಸೆನ್ಸ್ ಗಿಟ್ಟಿಸಿಕೊಂಡು ಸ್ಪರ್ಧಾತ್ಮಕತೆಯನ್ನೇ ಕೊಂದುಹಾಕಿದ್ದ ಸ್ಥಿತಿ ಬದಲಾಯಿಸುವುದಕ್ಕೆ ವಿದೇಶಿ ಹೂಡಿಕೆಗಳಿಗೆ ಸಮ್ಮತಿ….ಇಂಥವೇ ಹಲವು ಕ್ರಮಗಳನ್ನು ಅವತ್ತಿನ ಆರ್ಥಿಕ ಉದಾರೀಕರಣ ಹೊಂದಿತ್ತು. ರಾವ್ ತಮ್ಮ ಸರ್ಕಾರದಲ್ಲಿ ವಿತ್ತ ಮಂತ್ರಿನ್ನಾಗಿ ಯಾವ ಮನಮೋಹನ ಸಿಂಗ್ ಅವರನ್ನು ನೇಮಿಸಿಕೊಂಡಿದ್ದರೋ ಅವರಿಗೇ ಹೆಚ್ಚು ಶ್ರೇಯಸ್ಸು ಕೊಡುವ ಪರಿಪಾಠವಿದೆ. ತಪ್ಪಿಲ್ಲ. ಆದರೆ, ಇದರ ರಾಜಕೀಯ ಬಿರುಗಾಳಿಗಳನ್ನು ಅವತ್ತು ಸಮರ್ಥವಾಗಿ ಎದುರಿಸಿದ್ದು ನರಸಿಂಹರಾವ್.

ಅವತ್ತಿಗೆ ಪ್ರತಿಪಕ್ಷಗಳ ಕತೆ ಹಾಗಿರಲಿ, ಕಾಂಗ್ರೆಸ್ ಸ್ವಪಕ್ಷೀಯರೇ ನರಸಿಂಹರಾವ್ ಅವರ ಆರ್ಥಿಕ ಉದಾರೀಕರಣಕ್ಕೆ ಅಸಮಾಧಾನಗೊಂಡರು. ಮಾಧವರಾವ್ ಸಿಂಧಿಯಾ, ಬಲರಾಮ ಜಾಕರ್ ಇತ್ಯಾದಿ ಅವತ್ತಿನ ಕಾಂಗ್ರೆಸ್ ದಿಗ್ಗಜರೇ ದುಸುಮುಸು ಶುರುಮಾಡಿದರು. ಕಾಂಗ್ರೆಸ್ಸಿನ ಕನಿಷ್ಟ 55 ಸಂಸದರು ಆರ್ಥಿಕ ಉದಾರೀಕರಣದ ವಿಷಯದಲ್ಲಿ ರಾವ್ ವಿರುದ್ಧವಿದ್ದರು ಎಂಬುದು ಆಗಿನ ಇಂಟಲಿಜೆನ್ಸ್ ವರದಿಯಾಗಿತ್ತು. ವಿಪಕ್ಷದಲ್ಲಿದ್ದ ಬಿಜೆಪಿ ಸಹ ಬಹಿರಂಗವಾಗಿ ವಿರೋಧವನ್ನೇ ಮಾಡಿತಾದರೂ ಆಂತರ್ಯದಲ್ಲಿ ಈ ನೀತಿಗಳ ಪರವಿತ್ತು ಎಂಬುದು ವಿಶ್ಲೇಷಕರು ಹೇಳುವ ಮಾತು.

ಅದೇನೇ ಇರಲಿ, ಬಹಳ ದೊಡ್ಡ ವಿರೋಧ ಬಂದಿದ್ದು ಅವತ್ತಿನ ಭಾರತದ ಕಾರ್ಪೋರೇಟ್ ವಲಯದಿಂದ. ಏಕೆಂದರೆ ಇವರೆಲ್ಲ ಯಾವುದೇ ಗುಣಮಟ್ಟದ ಸ್ಪರ್ಧೆ ಇಲ್ಲದೇ ಕೇವಲ ಲಾಬಿ ಬಲದಿಂದ ತಮ್ಮ ಸಾಮ್ರಾಜ್ಯ ಪೊರೆದುಕೊಂಡಿದ್ದರು. ಉದಾಹರಣೆಗೆ, ನಾವೆಲ್ಲ ರೊಮಾಂಟಿಕ್ ಆಗಿ ಮಾತನಾಡುವ ಬಜಾಜ್ ಕಂಪನಿ. ಭಾರತೀಯನೊಬ್ಬ ಇವರ ಸ್ಕೂಟರ್ ಪಡೆಯಬೇಕೆಂದರೆ ಆರೇಳು ತಿಂಗಳು ಕಾಯಬೇಕಿತ್ತು. ಮತ್ಯಾವುದೇ ಆಯ್ಕೆಗಳೇ ಇರಲಿಲ್ಲ. ಹೀಗಾಗಿ ದುಡ್ಡು ತೆರುವ ಗ್ರಾಹಕನೇ ತನ್ನ ಜೀತದಲ್ಲಿದ್ದಾನೇನೋ ಎಂಬ ಅಹಂಕಾರ-ಉಡಾಫೆಗಳಲ್ಲೇ ಅವತ್ತಿನ ಕಂಪನಿಗಳು ವರ್ತಿಸುತ್ತಿದ್ದವು. ಯಾವಾಗ ಬಹುರಾಷ್ಟ್ರೀಯ ಕಂಪನಿಗಳು ಮತ್ತು ವಿದೇಶಿ ಬಂಡವಾಳಕ್ಕೂ ನರಸಿಂಹ ರಾಯರು ಬಾಗಿಲು ತೆರೆದಿರಿಸಿದರೋ ಆಗ ಅವತ್ತಿನ ದಿಗ್ಗಜ ಉದ್ಯಮಿಗಳೆಲ್ಲ ತಮ್ಮದೊಂದು ಕ್ಲಬ್ ಮಾಡಿಕೊಂಡು, ನೀವು ನಮ್ಮ ಉದ್ಯಮಗಳಿಗೆ ಸಮಾನ ಪೈಪೋಟಿಯ ಅವಕಾಶವನ್ನೇ ಕಸಿಯುತ್ತಿದ್ದೀರಿ ಅಂತ ಸರ್ಕಾರಕ್ಕೆ ದೂರಿತ್ತವು. ರಾಹುಲ್ ಬಜಾಜ್, ಜೆಮ್ಶೆಡ್ ಗೋದ್ರೆಜ್, ಎಲ್ ಎಮ್ ಥಾಪರ್, ಸಿ ಕೆ ಬಿರ್ಲಾ ಸೇರಿದಂತೆ ಎಲ್ಲ ಘಟಾನುಘಟಿ ಉದ್ಯಮಿಗಳೂ ನರಸಿಂಹ ರಾವ್ ಸರ್ಕಾರದ ವಿರುದ್ಧವಿದ್ದರು.

ಅಷ್ಟಾಗಿಯೂ ನರಸಿಂಹ ರಾಯರು ಹಿಂದಕ್ಕಡಿಯಿಡಲಿಲ್ಲ. ಹಾಗಂತ ಸಂಘರ್ಷದ ಮಾರ್ಗವನ್ನೂ ತುಳಿಯದೇ, ವಿರೋಧಿಸಿದವರ ಜತೆಗೆಲ್ಲ ನಿರಂತರ ಸಂವಾದ ಮಾಡುತ್ತ, ಭಾರತೀಯ ಉದ್ಯಮಿಗಳಿಗೆ ಕೆಲವು ರಿಯಾಯತಿಗಳನ್ನು ನೀಡಿ ಅವರ ಕೋಪ ಶಮನಗೊಳಿಸುತ್ತ ತಮ್ಮ ನೀತಿಗಳನ್ನು ಅನುಷ್ಠಾನಗೊಳಿಸಿದರು. ಇವತ್ತಿಗೆ ಹೊಸ ಬಗೆಯ ಉದ್ಯೋಗಗಳು, ಆ ಮೂಲಕ ಹಣದ ಹರಿವು ಹಾಗೂ ಅದು ಸೃಷ್ಟಿಸಿದ ಮಧ್ಯಮ ವರ್ಗ ಎನ್ನುವುದೇನಾದರೂ ಇದ್ದರೆ ಅದಕ್ಕೆಲ್ಲ ಅಡಿಪಾಯ ಹಾಕಿದ್ದು ನರಸಿಂಹ ರಾಯರೆಂಬುದನ್ನು ಮರೆಯುವಂತಿಲ್ಲ. ಹಿಂದಿನ ಅವಧಿಯಲ್ಲಷ್ಟೇ ನಿಮ್ಮ ಸರ್ಕಾರ ಸಂಖ್ಯೆ ಒಟ್ಟುಹಾಕಲಾಗದೇ ಬಿದ್ದುಹೋಗಿದೆ. ಈ ಬಾರಿ 272ರ ಮ್ಯಾಜಿಕ್ ನಂಬರಿನೆದುರು ನಿಮಗೆ ಸಿಕ್ಕಿರುವ ನಂಬರ್ 182 ಮಾತ್ರ. ಇಂಥ ಸ್ಥಿತಿಯಲ್ಲಿ ಈಗೊಂದು ನಿರ್ಧಾರ ತೆಗೆದುಕೊಂಡರೆ ಜಗತ್ತನ್ನೇ ಎದುರುಹಾಕಿಕೊಳ್ಳುವ ಸಂಭವವಿದೆ. ಮೊದಲೇ ಕಿಚಡಿ ಸರ್ಕಾರ, ಮೇಲಿಂದ ಜಾಗತಿಕ ರಾಜಕೀಯದಾಟವನ್ನೂ ತಾಳಿಕೊಳ್ಳಬಲ್ಲಿರಾ?

ಹೀಗೊಂದು ಪ್ರಶ್ನೆ ಸಾಮಾನ್ಯ ನೇತಾರನಿಗೆ ಎದುರಾಗಿದ್ದರೆ ಆತ ರಿಸ್ಕ್ ಇಲ್ಲದ, “ದಿನ ಕಳೆಯುವ” ಮಾರ್ಗ ಆರಿಸಿಕೊಳ್ಳುತ್ತಿದ್ದನೇನೋ. ಆದರೆ, 1998ರಲ್ಲಿ ಈ ಪ್ರಶ್ನೆ ಎದುರಾಗಿದ್ದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ. ಕಿಚಡಿ ಸರ್ಕಾರವೇ ಆಗಿದ್ದರೇನಂತೆ, ಅವರು ದೇಶಹಿತಕ್ಕಾಗಿ 1998ರ ಮೇನಲ್ಲಿ ಪೋಖ್ರಾನಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿಯೇಬಿಟ್ಟರು! ಜಗತ್ತೇ ಬೆಚ್ಚಿಬಿತ್ತು. ಫ್ರಾನ್ಸ್ ಹೊರತುಪಡಿಸಿ, ಅಮೆರಿಕ ಪ್ರಣೀತ ಇಡೀ ಪಾಶ್ಚಾತ್ಯ ಜಗತ್ತು ಭಾರತದ ಮೇಲೆ ಆರ್ಥಿಕ ದಿಗ್ಬಂಧನ ಹೇರಿತು. ಆಗಿನ್ನೂ ನಾವು ಜಾಗತಿಕ ವೇದಿಕೆಯಲ್ಲಿ ಗಮನಾರ್ಹ ಆರ್ಥಿಕ ಶಕ್ತಿ ಅಂತೇನೂ ಅನಿಸಿಕೊಂಡಿರಲಿಲ್ಲ. ಆದರೇನಂತೆ, ವಾಜಪೇಯಿ ಅಟಲರಾಗಿ, ಅಚಲರಾಗಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ಅವತ್ತಿಗೆ ಪ್ರಬಲವಾಗಿದ್ದ ಎಡರಂಗ ಮತ್ತದರ ವಿಚಾರಧಾರೆ ಮಾಧ್ಯಮ ವೇದಿಕೆಗಳು ಹಲವು ಬಗೆಗಳಲ್ಲಿ ಟೀಕೆಗಳನ್ನು ನಡೆಸಿದವು. ಭಾರತವು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಬೇಕಾದ ಒತ್ತಡವನ್ನು ನಿರ್ಮಿಸಲು ಅಮೆರಿಕ ಪ್ರಯತ್ನಿಸಿತು. ನಾಲ್ಕು ವರ್ಷಗಳ ಕಾಲ ಈ ಒತ್ತಡ ಸಹಿಸಿಕೊಂಡ ವಾಜಪೇಯಿಯವರ ನಾಯಕತ್ವವು ಅಮೆರಿಕವನ್ನೂ ತಣ್ಣಗಾಗಿಸಿತು. ಯಾವ ಭಾರತವನ್ನು ಅಣುಶಕ್ತಿಗೆ ಬೇಕಾದ ಪದಾರ್ಥಗಳ ಪೂರೈಕೆಜಾಲದಲ್ಲಿ ಅಸ್ಪೃಶ್ಯವನ್ನಾಗಿಸಲಾಗಿತ್ತೋ ಅದರ ಜತೆಯೇ ನಾಗರಿಕ ಅಣು ಒಪ್ಪಂದ ಮಾಡಿಕೊಳ್ಳುವುದಕ್ಕೆ 2002ರಲ್ಲಿ ಇದೇ ವಾಜಪೇಯಿ ಅವರ ಕಾಲದಲ್ಲೇ ಅಮೆರಿಕವು ಮಾತುಕತೆ ಶುರುಮಾಡಿತು.

ಈ ನಾಗರಿಕ ಅಣು ಒಪ್ಪಂದ ಸಾಕಾರವಾಗಿದ್ದು ಮನಮೋಹನ ಸಿಂಘರ ಅವಧಿಯಲ್ಲಿ. ಅದು ಕೂಡ ಮೈತ್ರಿಸೂಕ್ಷ್ಮಗಳ ನಡುವೆಯೇ ಕೈಗೊಂಡ ಬಹುದೊಡ್ಡ ನಿರ್ಧಾರ.

2004ರಲ್ಲಿ ಯುಪಿಎ-1 ಸರ್ಕಾರ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ಸಿಗೆ ಇದ್ದ ಸ್ಥಾನಗಳಾದರೂ ಎಷ್ಟು? 145 ಮಾತ್ರ. ಅವತ್ತಿಗೆ ಇನ್ನೂ ಪ್ರಬಲವಾಗಿಯೇ ಇದ್ದ ಸಿಪಿಎಂ 32 ಸ್ಥಾನ ಗಳಿಸಿ ಮನಮೋಹನ ಸಿಂಘರ ಸರ್ಕಾರವನ್ನು ಬೆಂಬಲಿಸಿತ್ತು. ಅಂಥ ಸಮಯದಲ್ಲಿ ಅಮೆರಿಕದೊಂದಿಗೆ ನಾಗರಿಕ ಅಣು ಒಪ್ಪಂದವನ್ನು ತಮ್ಮ ಆದ್ಯತೆಯನ್ನಾಗಿ ಕೈಗೆತ್ತಿಕೊಂಡರು ಮನಮೋಹನ ಸಿಂಘ್. ಇವತ್ತೇನಾದರೂ ಭಾರತಕ್ಕೆ ಯುರೇನಿಯಂ ಪೂರೈಕೆ ಸಮರ್ಪಕವಾಗಿರುವುದಕ್ಕೆ ಜಾಗತಿಕ ಪೂರೈಕೆ ಜಾಲ ಸಹಕರಿಸುತ್ತಿದೆ ಎಂದಾದರೆ ಅದರ ಹಿಂದಿರುವುದು ಮನಮೋಹನರ ಮೊದಲ ಅವಧಿಯಲ್ಲಿ ಸಾಕಾರವಾದ ಈ ಒಪ್ಪಂದ.

ಈ ಒಪ್ಪಂದದ ಸಾರ ಹೀಗಿತ್ತು- ಭಾರತವು ತನ್ನ ನಾಗರಿಕ ಹಾಗೂ ಅಣ್ವಸ್ತ್ರ ಉದ್ದೇಶದ ಯೋಜನೆಗಳನ್ನು ಪ್ರತ್ಯೇಕಗೊಳಿಸುವುದು ಹಾಗೂ ನಾಗರಿಕ ಬಳಕೆಯ ಎಲ್ಲ ಸ್ಥಾವರಗಳನ್ನು ಅಮೆರಿಕ ಪ್ರಣೀತ ಅಂತಾರಾಷ್ಟ್ರೀಯ ಗುಂಪಿನ ಪರಿಶೀಲನೆಗೆ ತೆರೆದಿರಿಸುವುದು.

ಆದರೆ, ಮನಮೋಹನ ಸಿಂಘ್ ಈ ಕಾರ್ಯಕ್ಕೆ ಮುಂದಾಗುತ್ತಲೇ, “ಇದು ಅಮೆರಿಕಕ್ಕೆ ನಮ್ಮ ಸಾರ್ವಭೌಮತ್ವ ಒತ್ತೆ ಇಟ್ಟಂತೆ” ಎಂದೆಲ್ಲ ಎಡಪಕ್ಷಗಳು ಪ್ರತಿಭಟನೆ ಶುರುಮಾಡಿದವು. ಆಗ, ಸರ್ಕಾರ ಬಿದ್ದರೂ ಪರವಾಗಿಲ್ಲ ಆದರೆ ಈ ಒಪ್ಪಂದದದಿಂದ ಹಿಂದೆ ಸರಿಯುವುದಿಲ್ಲ ಎಂಬ ಖಡಾಖಡಿ ನಿಲುವನ್ನು ಮನಮೋಹನ್ ಸಿಂಘ್ ಪ್ರದರ್ಶಿಸಿದ ರೀತಿಯನ್ನು ಆಗಿನ ಯುಪಿಎ ಅಧಿಕಾರವಧಿಯಲ್ಲಿ ಪ್ರಭಾವಕಾರಿ ಹುದ್ದೆಗಳನ್ನು ಅಲಂಕರಿಸಿದ್ದ ಮಾಂಟೆಕ್ ಸಿಂಘ್ ಅಹ್ಲುವಾಲಿಯಾ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಆ ಪ್ರಕಾರ, ಮನಮೋಹನ ಸಿಂಘರು ಇಂಡೊ-ಯು ಎಸ್ ಅಣುಶಕ್ತಿ ಒಪ್ಪಂದದ ವಿಷಯದಲ್ಲಿ ಎಡಪಕ್ಷಗಳು ತಮ್ಮನ್ನು ತೊರೆದರೂ ಅಡ್ಡಿ ಇಲ್ಲ ಎಂಬ ನಿಲುವಿಗೆ ಬಂದಿದ್ದರು. ಅವರ ಈ ನಿಲುವನ್ನು ಮಾಂಟೆಕ್ ಅವರು ಸೋನಿಯಾರಿಗೆ ಮುಟ್ಟಿಸಿದಾಗ, ಈ ವಿಷಯವೇನೂ ಸರ್ಕಾರವನ್ನು ಕಳೆದುಕೊಳ್ಳುವಷ್ಟರಮಟ್ಟಿಗೆ ಬೆಳೆಸಬೇಕಾಗಿದ್ದಲ್ಲ ಎಂಬುದೇ ಮೇಡಂ ಅಭಿಪ್ರಾಯವಾಗಿತ್ತು. ಆದರೆ, ಮನಮೋಹನರ ನಿಲವೇನೆಂದರೆ, ಎಡಪಂಥೀಯರು ಮೈತ್ರಿ ತೊರೆಯುವುದಿದ್ದರೆ ಆದಷ್ಟು ಬೇಗ ತೊರೆಯಲಿ. ಏಕೆಂದರೆ ಮುಂದಿನ ಮಾನ್ಸೂನ್ ಸಮರ್ಪಕವಾಗದೇ ಆರ್ಥಿಕತೆ ಕುಸಿದುಬಿಡಬಹುದಾದ ಸಂದರ್ಭದಲ್ಲಿ ಎಡಪಂಥೀಯರು ಇನ್ನೇನೋ ಕ್ಯಾತೆ ತೆಗೆದು ಬೆಂಬಲ ಹಿಂಪಡೆದು ಚುನಾವಣೆ ಎದುರಿಸುವ ಸಂದರ್ಭ ಬಂದರೆ ಆಗ ಲುಕ್ಸಾನು ಹೆಚ್ಚು ಎಂದಾಗಿತ್ತು. ಇದೇ ವಿಚಾರದಲ್ಲಿ ಸೋನಿಯಾ ಅವರೊಂದಿಗೂ ಮಾತುಕತೆ ನಡೆಸಿದ ಅವರು, ಅಂಥ ಸಂದರ್ಭ ಬಂದರೆ ನನ್ನ ರಾಜೀನಾಮೆ ತೆಗೆದುಕೊಂಡುಬಿಡಿ ಎನ್ನುವ ಮೂಲಕ ಅಣು ಒಪ್ಪಂದದ ವಿಚಾರದಲ್ಲಿ ತಾವು ಹಿಂದಡಿಯಿಡಲು ತಯಾರಿಲ್ಲ ಎಂಬ ಸಂದೇಶ ಮುಟ್ಟಿಸಿದ್ದಾಗಿ ಮಾಂಟೆಕ್ ಬರೆದುಕೊಂಡಿದ್ದಾರೆ.ಕೊನೆಗೊಮ್ಮೆ, ಒಪ್ಪಂದಕ್ಕೆ ಅಂಟಿಕೊಂಡು ಮನಮೋಹನ ಸಿಂಘ್ ಸರ್ಕಾರ ಮುಂದಡಿ ಇಟ್ಟಾಗ ಎಡಪಕ್ಷದವರು ಹೊರನಡೆದು ಯುಪಿಎ ವಿಶ್ವಾಸಮತ ಎದುರಿಸುವ ಸಂದರ್ಭ ಬಂತು. ಆಗ ಸಮಾಜವಾದಿ ಪಕ್ಷ ಬೆಂಬಲಕ್ಕೆ ಬಂದು ಸರ್ಕಾರ ಉಳಿಯಿತಲ್ಲದೇ ಒಪ್ಪಂದ ಸಾಕಾರಗೊಂಡಿತು. ಪ್ರಾರಂಭದಲ್ಲಿ ಅಮೆರಿಕದೊಂದಿಗೆ ನಾಗರಿಕ ಅಣು ಒಪ್ಪಂದವನ್ನು ತಾನೂ ವಿರೋಧಿಸಿದ್ದ ಸಮಾಜವಾದಿಪಕ್ಷ ಸಿಂಘ್ ಸರ್ಕಾರದ ಬೆಂಬಲಕ್ಕೆ ಬಂದಿದ್ದಾರೂ ಏಕೆ?

ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯ ರೂವಾರಿಯೂ ಆಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಸಂಪರ್ಕಿಸಿ, ಈ ಅಣು ಒಪ್ಪಂದದ ವಿಷಯದಲ್ಲಿ ಮುಲಾಯಂ ಸಿಂಘ್ ಅವರಿಗೆ ಮನವರಿಕೆ ಮಾಡಿಕೊಡುವಂತೆ ಮನಮೋಹನ ಸಿಂಘ್ ಕೇಳಿಕೊಂಡಿದ್ದರಂತೆ. ಯಾವಾಗ ಸಮಾಜವಾದಿ ಪಕ್ಷದ ನಿಯೋಗ ಕಲಾಂ ಅವರನ್ನು ಭೇಟಿ ಮಾಡಿ ನಾಲ್ಕು ತಾಸುಗಳ ಕಾಲ ಮಾತನಾಡಿ ಬಂತೋ, ಅದರ ಬೆನ್ನಲ್ಲೇ ಅಂದಿನ ಯುಪಿಎ-1ಗೆ ಬೆಂಬಲ ಸೂಚಿಸಿತು. ಮಾಂಟೆಕ್ ಒಬ್ಬ ಸಮೀಪದರ್ಶಿಯಾಗಿ ನೀಡಿರುವ ಈ ವಿವರಗಳು ಬೇರೆಡೆಯೂ ವರದಿಯಾಗಿವೆ.

ಸಮ್ಮಿಶ್ರ ಸರ್ಕಾರವೆಂದರೆ ಕೇವಲ ಆಯಾರಾಂ ಗಯಾರಾಂಗಳ ಆಟ ಎಂದುಕೊಳ್ಳಬೇಕಿಲ್ಲ. ಈ ಮೇಲೆ ವಿವರಿಸಿದ ಮೂರು ಪ್ರಕರಣಗಳಲ್ಲಿ ಎರಡು ಉದಾಹರಣೆಗಳಲ್ಲಂತೂ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಪಕ್ಷಕ್ಕೆ 200ಕ್ಕಿಂತ ಕಡಿಮೆ ಸ್ಥಾನಗಳಿದ್ದವು. ಆದರೆ ಅದು ಮಹತ್ತ್ವದ ನಿರ್ಧಾರ ಅನುಷ್ಠಾನಗೊಳಿಸುವುದಕ್ಕೆ ತೊಡಕಾಗಲಿಲ್ಲ. ಅಂದಮೇಲೆ, ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ಆಡಳಿತ ವ್ಯವಸ್ಥೆಯನ್ನು ದಶಕಗಳ ಕಾಲ ನಿರ್ವಹಿಸಿರುವ ನರೇಂದ್ರ ಮೋದಿಯಂಥವರಿಗೆ 240 ಸ್ಥಾನಗಳನ್ನಿಟ್ಟುಕೊಂಡ ಮೇಲೂ ಧೈರ್ಯ ಕಡಿಮೆಯಾಗುತ್ತದೆ ಎಂದೆಲ್ಲ ಊಹಿಸುವುದೇ ಅತಾರ್ಕಿಕವಾಗುತ್ತದೆ.

ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮೋದಿ ಸರ್ಕಾರದ ಮೂರನೇ ಅವತರಣಿಕೆಯೂ ಕಳೆದೆರಡು ಅವಧಿಗಳಷ್ಟೇ ಪ್ರಬಲವಾಗಿರುತ್ತದೆ.


Share