ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಬೆಳೆದಿರುವ ಮಣ್ಣಿನ ಫಲವತ್ತತೆ ಮೇಲೆ ಅಡ್ಡ ಪರಿಣಾಮ ಬೀರುವ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಬಿಸಾಡುವ ವಿಶೇಷ ಅಭಿಯಾನಕ್ಕೆ ಭಾರತದ ಗಡಿ ಭದ್ರತಾ ಪಡೆ BSF ಚಾಲನೆ ನೀಡಿದೆ.
ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದ ಸುಮಾರು 46 ಕಿಮೀ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಹಾಕುವ ಕಾರ್ಯಕ್ಕೆ ಬಿಎಸ್ ಎಫ್ ಚಾಲನೆ ನೀಡಿದ್ದು, ಈ ವಿಶೇಷ ಕಾರ್ಯದಲ್ಲಿ ಸಾವಿರಾರು ಯೋಧರು ಕೈ ಜೋಡಿಸಿದ್ದಾರೆ.ಪಾರ್ಥೇನಿಯಂ ನಿರ್ಮೂಲನೆ ಮಾಡುವ ಕಾರ್ಯಕ್ರಮದಲ್ಲಿ ಬಿಎಸ್ಎಫ್ ಯೋಧರಿಗೆ ಸ್ಥಳೀಯರು ಮತ್ತು ರೈತರೂ ಕೂಡ ಕೈಜೋಡಿಸಿದ್ದು, ಗಡಿಯಲ್ಲಿ ಬೆಳೆದಿದ್ದ ಸಾವಿರಾರು ಪಾರ್ಥೇನಿಯಂ ಗಿಡಗಳನ್ನು ಕಿತ್ತು ಹಾಕಿದರು.
ನಾಡಿಯಾದ ಗಡಿ ಪ್ರದೇಶದ ಹಲ್ದಾರ್ ಪಾರಾ, ಬಿಜೋಯ್‌ಪುರ, ನಲುವಾಪಾರ, ರಾಂಡಿಪುರ ಪ್ರದೇಶಗಳಲ್ಲಿ ಈ Parthenium ನಿರ್ಮೂಲನೆ ಅಭಿಯಾನ ನಡೆದಿದ್ದು, ಬಿಎಸ್‌ಎಫ್‌ನ 32ನೇ ಬೆಟಾಲಿಯನ್ ಮುಖ್ಯಸ್ಥ ಸುಜೀತ್ ಕುಮಾರ್ ಅವರು ಪಾರ್ಥೇನಿಯಂ ಗಿಡದಿಂದಾಗುವ ಹಾನಿಕಾರಕ ಅಂಶಗಳನ್ನು ಸ್ಥಳೀಯರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
”ನಾನು ಮತ್ತು ನನ್ನ ತಂಡ ಪ್ರತಿದಿನ ಬೆಳಿಗ್ಗೆ 2 ಗಂಟೆಗಳ ಕಾಲ ಈ ಕೆಲಸವನ್ನು ಮಾಡುತ್ತಿದ್ದೇವೆ. ದಿನವಿಡೀ, ಎಲ್ಲಿಯಾದರೂ ಇಂತಹ ಹಾನಿಕಾರಕ ಗಿಡಗಳು ಕಂಡುಬಂದರೂ, ಅವುಗಳನ್ನು ನಿರ್ಮೂಲನೆ ಮಾಡಲು ಸೈನಿಕರಿಗೆ ಸೂಚಿಸಲಾಗಿದೆ. ಆ ಮೂಲಕ ಈ ಪ್ರದೇಶವನ್ನು ಶೀಘ್ರದಲ್ಲೇ ಪಾರ್ಥೇನಿಯಂ ಮುಕ್ತ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸುಜೀತ್ ಕುಮಾರ್ ಹೇಳಿದರು.ಸೈನಿಕರಿಗೆ ಸಾಥ್ ನೀಡಿ ಮಾತನಾಡಿದ ಸ್ಥಳೀಯ ರೈತರೊಬ್ಬರು.. ”ಈ ಪಾರ್ಥೇನಿಯಂ ಗಿಡಗಳು ನಮ್ಮ ಗ್ರಾಮದಲ್ಲಿ ಹೆಚ್ಚಾಗಿ ಬೆಳೆದಿದ್ದವು. ನಾವು ಬಿಎಸ್ಎಫ್ ಯೋಧರೊಂದಿಗೆ ಸೇರಿ ಈ ಹಾನಿಕಾರಕ ಗಿಡಗಳನ್ನು ಕಿತ್ತುಹಾಕುತ್ತಿದ್ದೇವೆ ಎಂದರು.
ಅಂದಹಾಗೆ, ಈ ಪಾರ್ಥೇನಿಯಂ ಮಣ್ಣಿಗೆ ತುಂಬಾ ಹಾನಿಕಾರಕವಾಗಿದ್ದು, ಈ ಹಾನಿಕಾರಕ ಸಸ್ಯವು ಮಣ್ಣಿನ ಫಲವತ್ತತೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಪಾರ್ಥೇನಿಯಂನಲ್ಲಿ ‘ಪಾರ್ಥೆನಿನ್’ ಎಂಬ ಹಾನಿಕಾರಕ ರಾಸಾಯನಿಕವಿದ್ದು ಅದು ಒಂದು ರೀತಿಯ ವಿಷವಾಗಿದೆ. ಹೀಗಾಗಿ ಮಣ್ಣು ಕಲುಷಿತವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.