ಬೆಂಗಳೂರು: ತಮ್ಮ ಗೆಳತಿಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ ಎಂಬ ಕಾರಣಕ್ಕೆ ತಮ್ಮದೇ ಅಭಿಮಾನಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಹತ್ಯೆಗೈದು ರಾಜಕಾಲುವೆಗೆ ಎಸೆದ ಆರೋಪದ ಮೇರೆಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 13 ಮಂದಿಯನ್ನು ಪೊಲೀಸರು ಬಂಂಧನಕ್ಕೊಳಪಡಿಸಿದ್ದಾರೆ.
ಅಷ್ಟಕ್ಕೂ ಏನಿದು ಪ್ರಕರಣ? ಚಿತ್ರದುರ್ಗದ ರೇಣುಕಾ ಸ್ವಾಮಿಗೂ ನಟ ದರ್ಶನ್‌ಗೂ ಎಲ್ಲಿಂದೆಲ್ಲಿಗೆ ಸಂಬಂಧ? ಕೊಲೆ ನಡೆದಿದ್ದು ಹೇಗೆ? ಕೊಲೆಗೂ ಮುನ್ನ ಏನೇನಾಯ್ತು? ಕೊಲೆ ಪ್ರಕರಣ ಇಂಚಿಂಚೂ ಮಾಹಿತಿ ಇಲ್ಲಿದೆ…
ಕಳೆದ 10 ವರ್ಷಗಳಿಂದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ಸಂಬಂಧ ಇದೆ ಎನ್ನಲಾಗುತ್ತಿದ್ದು ದರ್ಶನ್- ವಿಜಯಲಕ್ಷ್ಮೀ ಮಧ್ಯೆ ಪವಿತ್ರಾ ಗೌಡ ಬಂದಿದ್ದಾರೆ ಎಂದು ಅಭಿಮಾನಿ ರೇಣುಕಾಸ್ವಾಮಿ ಕೆರಳಿದ್ದಾರೆ. ದರ್ಶನ್-ವಿಜಯಲಕ್ಷ್ಮೀ ಸಂಸಾರದಲ್ಲಿ ಹುಳಿ ಹಿಂಡಿದ್ದು ಪವಿತ್ರಾ ಗೌಡ ಎಂಬ ಸಿಟ್ಟು, ಬೇಸರ ರೇಣುಕಾ ಸ್ವಾಮಿ ಅವರಲ್ಲಿತ್ತು. ಇದೇ ಕಾರಣಕ್ಕೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್‌ಗಳನ್ನ ಕಳುಹಿಸಿದ್ದರು. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿದ ಪರಿಣಾಮ ರೇಣುಕಾ ಸ್ವಾಮಿ ಹತ್ಯೆಯಾಗಿದೆ ಎನ್ನಲಾಗಿದೆ. ಈ ವಿಚಾರವನ್ನು ಪವಿತ್ರಾ ಅವರು ದರ್ಶನ್ ಅವರ ಗಮನಕ್ಕೆ ತಂದಿದ್ದು, ಇದಕ್ಕೆ ರೇಣುಕಾ ಸ್ವಾಮಿ ವಿರುದ್ಧ ದರ್ಶನ್ ಕೆಂಡಾಮಂಡಲಗೊಂಡಿದ್ದರು.
ಪರಿಣಾಮ, ಚಿತ್ರದುರ್ಗಕ್ಕೆ ದೂರವಾಣಿ ಕರೆ ಹೋಗಿದೆ. ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರಗೆ ರೇಣುಕಾ ಸ್ವಾಮಿ ಬಗ್ಗೆ ಪತ್ತೆ ಹಚ್ಚುವಂತೆ ಸೂಚಿಸಲಾಗಿದೆ.ಬಳಿಕ ರೇಣುಕಾ ಸ್ವಾಮಿ ಅವರನ್ನ ವಾಚ್ ಮಾಡಿ, ಫೋನ್ ನಂಬರ್ ಕಲೆಕ್ಟ್ ಮಾಡಿ, ಹುಡುಗಿಯಂತೆ ಕರೆ ಮಾಡಿ ಮಾತನಾಡಿ ನಿರ್ದಿಷ್ಟ ಜಾಗಕ್ಕೆ ಬರಲು ಸೂಚಿಸಲಾಗಿದೆ. ಅಲ್ಲಿಂದ ರೇಣುಕಾ ಸ್ವಾಮಿ ಅವರನ್ನ ಕಿಡ್ನ್ಯಾಪ್ ಮಾಡಲಾಗಿದೆ.
ಆನಂತರ ಆಗಬಾರದ್ದು ಆಗಿಹೋಗಿದೆ.
ಜೂನ್ 8 – ರೇಣುಕಾ ಸ್ವಾಮಿ ಅವರನ್ನ ಚಿತ್ರದುರ್ಗದಿಂದ ‘ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ’ ಅಧ್ಯಕ್ಷ ರಾಘವೇಂದ್ರ & ಗ್ಯಾಂಗ್ ಅಪಹರಿಸಿ ಬೆಂಗಳೂರಿಗೆ ಕರೆತಂದರು.
ಜೂನ್ 8 – ದರ್ಶನ್ ಆಪ್ತ ವಿನಯ್‌ಗೆ ಸೇರಿದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿದೆ.
ಜೂನ್ 8 ರಾತ್ರಿ – ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿದೆ.
ಜೂನ್ 8 ರಾತ್ರಿ – ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಹತ್ಯೆ
ಜೂನ್ 9 ಮುಂಜಾನೆ 4.30 – ಶೆಡ್‌ನಲ್ಲಿನ ಶವವನ್ನ ವಿನಯ್ ಮತ್ತು ಇತರರು ಸುಮನಹಳ್ಳಿ ರಾಜಕಾಲುವೆಗೆ ಎಸೆದರು.
ಜೂನ್ 9 ಬೆಳಗ್ಗೆ 8.30– ಅಪರಿಚಿತ ಶವ (ರೇಣುಕಾ ಸ್ವಾಮಿ) ಡೆಲಿವರಿ ಬಾಯ್ ಕಣ್ಣಿಗೆ ಬಿದ್ದಿದೆ.
ಜೂನ್ 9 ಬೆಳಗ್ಗೆ – ಅಪರಿಚಿತ ಶವ ಪತ್ತೆ ಕುರಿತು ಸ್ಥಳೀಯ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ.
ಜೂನ್ 9 ಬೆಳಗ್ಗೆ – ಸುಮನಹಳ್ಳಿ ರಾಜಕಾಲುವೆಗೆ ಕಾಮಾಕ್ಷಿಪಾಳ್ಯ ಪೊಲೀಸರ ಭೇಟಿ, ಪರಿಶೀಲನೆ
ಜೂನ್ 10 – ಕೊಲೆ ಮಾಡಿದ್ದು ತಾವೇ ಎಂದು ಹೇಳಿ ದರ್ಶನ್ ಅವರ ಮೂವರು ಸಹಚರರು ಸರೆಂಡರ್ ಆದರು. ತನಿಖೆ, ವಿಚಾರಣೆ ಚುರುಕುಗೊಳಿಸಿದ ಪೊಲೀಸರು.
ಜೂನ್ 10 – ತನಿಖೆ ವೇಳೆ ಪೊಲೀಸರಿಗೆ ಅಚ್ಚರಿ ಕಾದಿತ್ತು. ವಿಚಾರಣೆ ನಡೆದಾಗ ಕೊಲೆಯ ಅಸಲಿ ವಿಷಯ ಬೆಳಕಿಗೆ ಬಂದಿದೆ.
ಜೂನ್ 10 ರಾತ್ರಿ – ಹತ್ಯೆಯಲ್ಲಿ ದರ್ಶನ್ ಕೈವಾಡ ಇದೆ ಎಂದು ತಿಳಿದ ಬಳಿಕ ‘ಚಾಲೆಂಜಿಂಗ್ ಸ್ಟಾರ್’ನ ಅರೆಸ್ಟ್ ಮಾಡಲು ಮೈಸೂರಿಗೆ ತೆರಳಿದ ಬೆಂಗಳೂರು ಪೊಲೀಸರು.
ಜೂನ್ 10 – ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಆರೋಪಿಗಳ ಬಂಧನ.
ಜೂನ್ 11 ಬೆಳಗ್ಗೆ 6.30 – ಮೈಸೂರಿನ ರಾಡಿಸನ್ ಹೋಟೆಲ್‌ನಲ್ಲಿ ಜಿಮ್ ಮಾಡುತ್ತಿದ್ದ ದರ್ಶನ್.
ಜೂನ್ 11 ಬೆಳಗ್ಗೆ – ಮೈಸೂರಿನ ರಾಡಿಸನ್ ಹೋಟೆಲ್‌ನಲ್ಲಿ ದರ್ಶನ್‌ನ ವಶಕ್ಕೆ ಪಡೆದ ಪೊಲೀಸರು.
ಜೂನ್ 11 – ದರ್ಶನ್ ಅವರನ್ನ ಬೆಂಗಳೂರಿಗೆ ಕರೆತಂದ ಪೊಲೀಸರು.
ಜೂನ್ 11 ಮಧ್ಯಾಹ್ನ – ಪವಿತ್ರಾ ಗೌಡರನ್ನ ವಶಕ್ಕೆ ಪಡೆದ ಪೊಲೀಸರು.
ಜೂನ್ 11 ಮಧ್ಯಾಹ್ನ – ದರ್ಶನ್ ಬಂಧನ, ಪವಿತ್ರಾ ಗೌಡ ಬಂಧನ.
ಜೂನ್ 11 ಸಂಜೆ – 13 ಬಂಧಿತ ಆರೋಪಿಗಳನ್ನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು.
ಜೂನ್ 11 ಸಂಜೆ – ಬೌರಿಂಗ್ ಆಸ್ಪತ್ರೆಯಿಂದ ನ್ಯಾಯಾಲಯಕ್ಕೆ 13 ಬಂಧಿತ ಆರೋಪಿಗಳನ್ನ ಕರೆದೊಯ್ದ ಪೊಲೀಸರು. ನ್ಯಾಯಾಧೀಶರ ಮುಂದೆ 13 ಬಂಧಿತ ಆರೋಪಿಗಳು ಹಾಜರು.
ಜೂನ್ 11 ಸಂಜೆ – ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್
ಜೂನ್ 11 ಸಂಜೆ – 13 ಬಂಧಿತ ಆರೋಪಿಗಳನ್ನ 6 ದಿನ ಪೊಲೀಸ್ ಕಸ್ಟಡಿಗೆ ನೀಡಿದ ನ್ಯಾಯಾಲಯ.