Loksabha Election 2024 ಫಲಿತಾಂಶ: ಷೇರುಪೇಟೆ ಮತ್ತೆ ಜಿಗಿತ, ಸೆನ್ಸೆಕ್ಸ್ ದಾಖಲೆಯ 1619 ಅಂಕ ಏರಿಕೆ, 7 ಲಕ್ಷ ಕೋಟಿ ರೂ ಲಾಭ!

Loksabha Election 2024 ಫಲಿತಾಂಶ: ಷೇರುಪೇಟೆ ಮತ್ತೆ ಜಿಗಿತ, ಸೆನ್ಸೆಕ್ಸ್ ದಾಖಲೆಯ 1619 ಅಂಕ ಏರಿಕೆ, 7 ಲಕ್ಷ ಕೋಟಿ ರೂ ಲಾಭ!

Share

ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಾತಾಳಕ್ಕೆ ಕುಸಿದಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಇಂದು ಮತ್ತೆ ಸೆನ್ಸೆಕ್ಸ್ 1619 ಅಂಕ ಏರಿಕೆ ಕಂಡಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ದಿನ ಅಂದರೆ ಜೂನ್ 4ರಂದು ಪಾತಾಳಕ್ಕೆ ಕುಸಿದಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಮತ್ತೆ ಲಯಕಂಡುಕೊಂಡಿರುವ ಷೇರುಮಾರುಕಟ್ಟೆ ಇಂದು ದಾಖಲೆಯ ಏರಿಕೆ ಕಂಡಿದೆ.

ಬಿಎಸ್‌ಇ ಸೆನ್ಸೆಕ್ಸ್‌ 1,618 ಪಾಯಿಂಟ್‌ಗಳ ಏರಿಕೆಯೊಂದಿಗೆ ದಿನದ ವಹಿವಾಟಿನ ಅಂತ್ಯಕ್ಕೆ 76,693 ಅಂಕಗಳಿಗೆ ಏರಿಕೆಯಾಗಿದ್ದು, NSE ನಿಫ್ಟಿಯು 468 ಪಾಯಿಂಟ್‌ಗಳ ಏರಿಕೆಯೊಂದಿಗೆ ಕಳೆದ ಒಂದು ವರ್ಷದಲ್ಲಿಯೇ ದಾಖಲೆಯ ಗರಿಷ್ಠ 23,290 ಅಂಕಗಳಿಗೆ ತಲುಪಿದೆ.ಇದರಿಂದಾಗಿ, ಹೂಡಿಕೆದಾರರು ಸುಮಾರು 7.5 ಲಕ್ಷ ಕೋಟಿ ರೂ. ಲಾಭ ಗಳಿಸಿದ್ದಾರೆ. ಅಂತೆಯೇ ಕಳೆದ ಎರಡು ದಿನಗಳಲ್ಲಿ ಹೂಡಿಕೆದಾರರಿಗೆ ಸುಮಾರು 21 ಲಕ್ಷ ಕೋಟಿ ರೂ. ಲಾಭವಾಗಿದೆ ಎಂದು ತಿಳಿದುಬಂದಿದೆ.

ಮತ್ತೆ ಮೋದಿ ಸರ್ಕಾರ, ಮಾರುಕಟ್ಟೆ ದಾಖಲೆಯ ಏರಿಕೆ

ಬಿಎಸ್‌ಇ ಸೆನ್ಸೆಕ್ಸ್‌ ಪಾಯಿಂಟ್‌ಗಳ ಏರಿಕೆಯಾದ ಕಾರಣ ಮಾರುಕಟ್ಟೆಯ ಬಂಡವಾಳವು 415 ಲಕ್ಷ ಕೋಟಿ ರೂಪಾಯಿಯಿಂದ 423 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, ಇದು ಹೂಡಿಕೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗುವುದು ಖಚಿತವಾದ ಕಾರಣ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಮುಂದುವರಿದಿದೆ ಎಂದು ಷೇರು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದಾಖಲೆಯ ಲಾಭ ಕಂಡ ಸಂಸ್ಥೆಗಳು

ನಿಫ್ಟಿ ಐಟಿಯ ಷೇರುಗಳ ಮೌಲ್ಯವು ಶೇ.3.5ರಷ್ಟು ಏರಿಕೆಯಾದ ಕಾರಣ ಇನ್ಫೋಸಿಸ್‌, ಟೆಕ್‌ ಮಹೀಂದ್ರಾ ಹಾಗೂ ಟಿಸಿಎಸ್‌ ಸೇರಿ ಹಲವು ಕಂಪನಿಗಳು ಉತ್ತಮ ಲಾಭ ಗಳಿಸಿವೆ. ಶೋಭಾ ಲಿಮಿಟೆಡ್‌, ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌, ಟಿವಿಎಸ್‌ ಮೋಟರ್‌ ಲಿಮಿಟೆಡ್‌, ರಿಲಯನ್ಸ್‌, ಟಾಟಾ ಸ್ಟೀಲ್‌, ಟಾಟಾ ಮೋಟರ್ಸ್‌ ಸೇರಿ ಹಲವು ಕಂಪನಿಗಳು ಭಾರಿ ಪ್ರಮಾಣದಲ್ಲಿ ಲಾಭ ಗಳಿಸಿವೆ.

ರಕ್ತಪಾತಕ್ಕೆ ಕಾರಣವಾಗಿದ್ದ ಫಲಿತಾಂಶ

ಇನ್ನು ಈ ಹಿಂದೆ ಚುನಾವಣಾ ಫಲಿತಾಂಶ ಬಂದ ದಿನ ಅಂದರೆ ಜೂನ್ 4ರಂದು ಷೇರು ಮಾರುಕಟ್ಟೆಯಲ್ಲಿ (Stock Market) ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ, ಹೂಡಿಕೆದಾರರಿಗೆ 31 ಲಕ್ಷ ಕೋಟಿ ರೂ. ನಷ್ಟವಾಗಿತ್ತು.


Share