ಕೇವಲ ಐದೇ ದಿನದಲ್ಲಿ ಬರೋಬ್ಬರಿ 870 ಕೋಟಿ ರೂ. ಸಂಪತ್ತು ಹೆಚ್ಚಿಸಿಕೊಂಡ ಚಂದ್ರಬಾಬು ನಾಯ್ಡು ಕುಟುಂಬ!

ಕೇವಲ ಐದೇ ದಿನದಲ್ಲಿ ಬರೋಬ್ಬರಿ 870 ಕೋಟಿ ರೂ. ಸಂಪತ್ತು ಹೆಚ್ಚಿಸಿಕೊಂಡ ಚಂದ್ರಬಾಬು ನಾಯ್ಡು ಕುಟುಂಬ!

Share

ಲೋಕಸಭೆ ಮತ್ತು ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಉತ್ತಮ ಪ್ರದರ್ಶನ ನೀಡಿದ ನಂತರ ಚಂದ್ರಬಾಬು ನಾಯ್ಡು ಅವರು ಸ್ಥಾಪಿಸಿದ ಕಂಪನಿಯು ಗಮನಾರ್ಹ ಲಾಭ ಗಳಿಸಿದೆ.

ಹೆರಿಟೇಜ್ ಫುಡ್ಸ್‌ನ ಷೇರುಗಳು ಕಳೆದ ಐದು ದಿನಗಳಲ್ಲಿ ಶೇಕಡಾ 55 ರಷ್ಟು ಏರಿಕೆಯಾಗಿದ್ದು, ಕಂಪನಿಯ ಒಡೆತನ ಹೊಂದಿರುವ ಅವರ ಪತ್ನಿ ನಾರಾ ಭುವನೇಶ್ವರಿ ಅವರ ಆಸ್ತಿ ಮೌಲ್ಯ 535 ಕೋಟಿ ರು ಹಾಗೂ ಪುತ್ರ ಲೋಕೇಶ್ 237 ಕೋಟಿ ರು ಗಳಿಸಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾಗುವ ಕೆಲವು ಗಂಟೆಗಳ ಮೊದಲು ಜೂನ್ 3 ರಂದು 424 ರೂ ಇದ್ದ ಹೆರಿಟೇಜ್ ಫುಡ್ಸ್ ಷೇರು ಬೆಲೆ ಇಂದು 661.25 ರೂ. ಗೆ ಏರಿಕೆಯಾಗಿದೆ. ಚಂದ್ರಬಾಬು ನಾಯ್ಡು ಅವರ ಪಕ್ಷವು ಐತಿಹಾಸಿಕ ಗೆಲುವು ದಾಖಲಿಸಿದ ಕಾರಣ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಡೆತನದ ಹೆರಿಟೇಜ್ ಫುಡ್ಸ್‌ ಕಂಪನಿಯ ಷೇರುಗಳ ಮೌಲ್ಯವು ಚುನಾವಣೆ ಫಲಿತಾಂಶದ ಬಳಿಕ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರು ಕಳೆದ 5 ದಿನಗಳಲ್ಲಿಯೇ 870 ಕೋಟಿ ರೂ. ಗಳಿಸಿದ್ದಾರೆ. ಇದರೊಂದಿಗೆ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯುವ 1,319 ಕೋಟಿ ರೂ.ನಿಂದ 2,190 ಕೋಟಿ ರೂ.ಗೆ ಏರಿಕೆಯಾಗಿದೆ.ಹೆರಿಟೇಜ್‌ ಫುಡ್ಸ್‌ ಕಂಪನಿಯಲ್ಲಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರ ಷೇರುಗಳ ಪ್ರಮಾಣವು ಶೇ.35.7ರಷ್ಟಿದೆ. ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಶೇ.24.37, ಪುತ್ರ ಲೋಕೇಶ್‌ ಶೇ.10.82ರಷ್ಟು ಹಾಗೂ ಸೊಸೆ ಬ್ರಹ್ಮಿಣಿ 0.46ರಷ್ಟು ಷೇರುಗಳನ್ನು ಹೊಂದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಮೊಮ್ಮಗ ದೇವಾಂಶ್‌ ಕೂಡ ಡೇರಿ ಕಂಪನಿಯಲ್ಲಿ 0.06ರಷ್ಟು ಷೇರು ಹೊಂದಿದ್ದಾನೆ.

ಹೆರಿಟೇಜ್‌ ಫುಡ್ಸ್‌ ಕಂಪನಿಯನ್ನು 1992ರಲ್ಲಿ ಸ್ಥಾಪನೆ ಮಾಡಲಾಗಿದ್ದು, ಡೇರಿ ಉತ್ಪನ್ನಗಳ ಪೂರೈಕೆಗೆ ಹೆಸರುವಾಸಿಯಾಗಿದೆ. ಹಾಲು, ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ, ಪನೀರ್‌, ಇಮ್ಯುನಿಟಿ ಮಿಲ್ಕ್‌ ಸೇರಿ ಹಲವು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ದೇಶದ 11 ರಾಜ್ಯಗಳಲ್ಲಿ ಸುಮಾರು 1.5 ಕೋಟಿ ಮನೆಗಳಲ್ಲಿ ಹೆರಿಟೇಜ್‌ ಫುಡ್ಸ್‌ ಕಂಪನಿಯ ಉತ್ಪನ್ನಗಳನ್ನು ಬಳಸಲಾಗುತ್ತದೆ.


Share