ಪೆನ್ ಡ್ರೈವ್ ಲೀಕ್ ಮಾಡಿದ ಆರೋಪಿಗಳನ್ನೂ ವಿಚಾರಣೆಗೊಳಪಡಿಸಿ: ಎಸ್‌ಐಟಿಗೆ ಎಚ್‌ಡಿ ರೇವಣ್ಣ ಪರ ವಕೀಲರ ಆಗ್ರಹ

ಪೆನ್ ಡ್ರೈವ್ ಲೀಕ್ ಮಾಡಿದ ಆರೋಪಿಗಳನ್ನೂ ವಿಚಾರಣೆಗೊಳಪಡಿಸಿ: ಎಸ್‌ಐಟಿಗೆ ಎಚ್‌ಡಿ ರೇವಣ್ಣ ಪರ ವಕೀಲರ ಆಗ್ರಹ

Share

ಹಾಸನ: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಪೆನ್ ಡ್ರೈವ್ ಅನ್ನು ಲೀಕ್ ಮಾಡಿದ ಕಾರ್ತಿಕ್ ಗೌಡ, ಪುಟ್ಟರಾಜ್ ಮತ್ತು ಶರತ್ ಗೌಡರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವಂತೆ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರ ಪರ ವಕೀಲ ಗೋಪಾಲ್ ಅವರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಒತ್ತಾಯಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ನ್ಯಾಯಾಲಯ ಮೂವರು ಆರೋಪಿಗಳಿಗೆ ಜಾಮೀನು ತಿರಸ್ಕರಿಸಿದೆ. ಆದರೂ ಇವರನ್ನು ಬಂಧಿಸುವಲ್ಲಿ ಎಸ್‌ಐಟಿ ವಿಫಲವಾಗಿದೆ ಎಂದು ಹೇಳಿದರು.ಇತ್ತೀಚೆಗಷ್ಟೇ ಹಾಸನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶ್ರೇಯಸ್ ಪಟೇಲ್ ವಿಜಯೋತ್ಸವದಲ್ಲಿ ಮೂವರು ಪಾಲ್ಗೊಂಡಿದ್ದರು. ಆದರೂ ಸ್ಥಳೀಯ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಎಸ್‌ಐಟಿ ಮೂವರನ್ನು ಬಂಧಿಸದೇ ಹೋದಲ್ಲಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಅಶ್ಲೀಲ ವಿಡಿಯೋಗಳ ಸೋರಿಕೆ ಕೂಡ ಲೈಂಗಿಕ ದೌರ್ಜನ್ಯದಂತೆಯೇ ಇರುತ್ತದೆ. ನ್ಯಾಯಾಲಯ ಜಾಮೀನು ತಿರಸ್ಕರಿಸಿದ ತಕ್ಷಣ ಎಸ್‌ಐಟಿ ಹೆಚ್‌ಡಿ ರೇವಣ್ಣ ಅವರನ್ನು ಬಂಧಿಸಿದೆ, ಆದರೆ, ಪ್ರಕರಣದಲ್ಲಿ ವೀಡಿಯೊವನ್ನು ಲೀಕ್ ಮಾಡಿದ ಆರೋಪದ ಮೂವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಹೆಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಪ್ರಕರಣದಲ್ಲಿ ಎಸ್‌ಐಟಿ ತಾರತಮ್ಯ ಎಸಗಿದೆ ಎಂದು ಆರೋಪಿಸಿದರು.


Share