ಬಿಜೆಪಿಯಲ್ಲಿ ಕಿಚ್ಚೆಬ್ಬಿಸಿದ ಕುಮಾರ ಪರ್ವ (ಸುದ್ದಿ ವಿಶ್ಲೇಷಣೆ)

ಬಿಜೆಪಿಯಲ್ಲಿ ಕಿಚ್ಚೆಬ್ಬಿಸಿದ ಕುಮಾರ ಪರ್ವ (ಸುದ್ದಿ ವಿಶ್ಲೇಷಣೆ)

Share

ಈ ಮೈತ್ರಿ ಎಷ್ಟು ದಿನ?

ಲೋಕಸಭೆ ಚುನಾವಣೆ ನಡೆದು ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಆರಂಭವಾಗಿರುವ ಚರ್ಚೆ ಇದು. ಜೆಡಿಎಸ್ ಜತೆಗಿನ ಮೈತ್ರಿಯಿದ ಬಿಜೆಪಿಗೆ ಹೆಚ್ಚಿನ ಲಾಭವೇನೂ ಆಗಿಲ್ಲ. ಆದರೆ ಈ ಮೈತ್ರಿಯಿಂದ ಲಾಭ ಪಡೆದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೆದ್ದ ನಂತರ ಉರುಳಿಸುತ್ತಿರುವ ಒಂದೊಂದೇ ದಾಳ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅದಕ್ಕಿಂತ ಹೆಚ್ಚಾಗಿ ಸಂಘ ಪರಿವಾರದ ಹಿನ್ನಲೆಯಿಂದ ಬಂದಿರುವ ಮೂಲ ಬಿಜೆಪಿ ಮುಖಂಡರಿಗೆ ಹೆಚ್ಚು ಕಿರಿಕಿರಿ ತಂದಿದೆ. ಮತ್ತೊಂದು ಕಡೆ ಸಂಘ ಪರಿವಾರವೂ ಈ ವಿಚಾರದಲ್ಲಿ ಸಮಾಧಾನವಾಗೇನೂ ಇಲ್ಲ.

ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಮಾಜಿ ಸಚಿವರಾದ ವಿ. ಸೋಮಣ್ಣ, ಡಾ. ಸುಧಾಕರ್ ಹಾಗೂ ತೇಜಸ್ವೀ ಸೂರ್ಯ ಸೇರಿದಂತೆ ಕೆಲವರು ನೇರವಾಗಿ ಜೆಡಿಎಸ್ ನ ಪ್ರಶ್ನಾತೀತ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಹಾಗೂ ಕುಮಾರ ಸ್ವಾಮಿಯವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಅದರಲ್ಲೂ ತುಮಕೂರು ಮತ್ತು ಚಿಕ್ಕ ಬಳ್ಳಾಪುರ ಕ್ಷೇತ್ರಗಳಿಂದ ಗೆದ್ದಿರುವ ವಿ. ಸೊಮಣ್ಣ ಮತ್ತು ಡಾ.ಸುಧಾಕರ್ ತಮ್ಮ ಗೆಲುವಿಗೆ ಜೆಡಿಎಸ್ ನಾಯಕತ್ವದ ಬೆಂಬಲವೇ ಪ್ರಮುಖ ಕಾರಣ ಎಂದು ಬಹಿರಂಗವಾಗೇ ಘೋಷಿಸಿರುವುದು ಮತ್ತು ಫಲಿತಾಂಶ ಘೋಷಣೆಯಾದ ಮರುಕ್ಷಣವೇ ಜೆಡಿಎಸ್ ನಾಯಕರನ್ನು ಭೇಟಿ ಮಾಡಿರುವುದು ಬಿಜೆಪಿಯ ವರಿಷ್ಠರಿಗೆ ಅಸಮಾಧಾನ ತಂದಿದೆ.

ವಿಶೇಷ ಎಂದರೆ ಈ ಇಬ್ಬರೂ ಮುಖಂಡರೂ ಬೇರೆ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದವರು ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರ ಅನುಭವಿಸಿದವರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸೋಮಣ್ಣ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ನೇರವಾಗೇ ಸಮರ ಸಾರಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಹಾಗೂ ಚಾಮರಾಜ ನಗರ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ ಸೋಮಣ್ಣ ತಮ್ಮ ಸೋಲಿಗೆ ಯಡಿಯೂರಪ್ಪ ಮತ್ತು ಅವರ ಪುತ್ರ, ಹಾಗೂ ಅವರ ಬೆಂಬಲಿಗರೇ ಕಾರಣ ಎಂದು ವರಿಷ್ಟರಿಗೆ ದೂರಿತ್ತಿದ್ದು ಈಗ ಗುಟ್ಟೇನಲ್ಲ.

ಲೋಕಸಭೆ ಚುನಾವಣೆಯ ಸಂದರ್ಭದಲ್ಲೂ ನೇರವಾಗಿ ದಿಲ್ಲಿ ನಾಯಕರನ್ನು ಸಂಪರ್ಕಿಸಿದ ಸೋಮಣ್ಣ ಹಾಗೂ ಡಾ. ಸುಧಾಕರ್ ಅಲ್ಲಿಂದಲೇ ಪಕ್ಷದ ಟಿಕೆಟ್ ತರುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ಯಡಿಯೂರಪ್ಪ ನಾಯಕತ್ವಕ್ಕೆ ಸವಾಲೆಸೆದಿದ್ದರು.ಈ ಬೆಳವಣಿಗೆ ಬಿಜೆಪಿಯಲ್ಲಿ ಸಾಕಷ್ಟು ಅಸಮಧಾನಕ್ಕೂ ಕಾರಣವಾಗಿತ್ತು. ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಪಕ್ಷದಲ್ಲಿ ಲಿಂಗಾಯಿತ ನಾಯಕನಾಗಿ ಬೆಳೆದು ನಿಲ್ಲುವ ಮಹತ್ವಾಕಾಂಕ್ಷೆ ಹೊತ್ತಿರುವ ಸೋಮಣ್ಣ ಆಗೊಮ್ಮೆ ಈಗೊಮ್ಮೆ ಕಾಂಗ್ರೆಸ್ ಪಕ್ಷದ ನಾಯಕರ ಜತೆಗಿನ ತಮ್ಮ ಹಳೆಯ ಸ್ನೇಹವನ್ನು ಬಳಸಿಕೊಂಡು ಆ ಪಕ್ಷ ಸೇರಲೂ ಪ್ರಯತ್ನಿಸಿದ್ದೂ ಉಂಟು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿದ್ದ ತುಮಕೂರು ಜಿಲ್ಲೆಯವರೇ ಆದ ಬಿಜೆಪಿ ಮುಖಂಡ ಮಾಜಿ ಸಚಿವ ಜೆ.ಸಿ. ಮಾಧು ಸ್ವಾಮಿ ಸೋಮಣ್ಣ ಸ್ಪರ್ಧೆ ಕಾರಣ ಮುನಿಸಿಕೊಂಡು ದೂರ ಸರಿದಿದ್ದು ಚುನಾವಣೆಯ ಸಂದರ್ಭದಲ್ಲಿ ಸಂಧಾನಕ್ಕೂ ಬಗ್ಗಿರಲಿಲ್ಲ.ಈಗ ಚುನಾವಣೆಯಲ್ಲಿ ಗೆದ್ದ ನಂತರ ಸೋಮಣ್ಣ ತಮ್ಮ ಗೆಲುವಿಗೆ ಜೆಡಿಎಸ್ ನಾಯಕರು , ಕಾರ್ಯಕರ್ತರು ಹಾಗೂ ಬಿಜೆಪಿ ವರಿಷ್ಠರೇ ಕಾರಣ ಎಂದೂ ಹೇಳುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಗುರಿಯಾಗಿಸಿಕೊಂಡಿರುವುದು ಕಾಣುತ್ತದೆ. ಇದೇ ಮಾದರಿಯಲ್ಲಿ ಡಾ. ಸುಧಾಕರ್ ಕೂಡಾ ಪ್ರತಿಕ್ರಿಯಿಸಿದ್ದಾರೆ.

ಅಲ್ಲಿಗೆ ಬಿಜೆಪಿಯ ದಿಲ್ಲಿ ವರಿಷ್ಠರ ಪಗಡೆಯಾಟಕ್ಕೆ ರಾಜ್ಯದಲ್ಲಿ ಇಬ್ಬರು ಪ್ರಮುಖ ಮುಖಂಡರು ಸಿಕ್ಕಂತಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗೊತ್ತುವ ಪ್ರಯತ್ನ ಶುರುವಾಗಿದೆ ಎಂಬುದನ್ನು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಬಿಜೆಪಿ ಮುಖಂಡರು ಒಪ್ಪಿಕೊಳ್ಳುತ್ತಾರೆ.

ಬಿಜೆಪಿಯಲ್ಲಿನ ಈ ವಿದ್ಯಮಾನಗಳನ್ನು ಅರಿತಿರುವ ಕುಮಾರಸ್ವಾಮಿ ಯಡಿಯೂರಪ್ಪ ವಿರುದ್ಧ ಒಳಗೊಳಗೇ ಕುದಿಯುತ್ತಿರುವ ಪ್ರಮುಖ ಮುಖಂಡರುಗಳನ್ನು ತಾವಾಗೇ ಸಂಪರ್ಕಿಸಿ ವಿಶ್ವಾಸಕ್ಕೆ ತಗೆದುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಈಗಿನ ಬೆಳವಣಿಗೆ.

ಒಂದಂತೂ ಸ್ಪಷ್ಟ. ಲೋಕಸಭಾ ಚುನಾವಣೆಗೆ ಮುನ್ನ ಜೆಡಿಎಸ್ ಅಸ್ತಿತ್ವ ಮುಗಿದೇ ಹೋಯಿತು ಎಂದು ಟೀಕಿಸುತ್ತಿದ್ದವರಿಗೆ ಮಂಡ್ಯದಲ್ಲಿ ಕುಮಾರಸ್ವಾಮಿ ಹಾಗೂ ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ ಬಾಬು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ದೇವೇಗೌಡರ ಅಳಿಯ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ಅವರ ಗೆಲವು ಮತ್ತೆ ಉತ್ಸಾಹ ಪುಟಿಯುವಂತೆ ಮಾಡಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋದರ ಡಿ.ಕೆ.ಸುರೇಶ್ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದು ಕುಮಾರಸ್ವಾಮಿಯವರ ಗೆಲುವಿನ ಓಟದ ಹುಮ್ಮಸ್ಸನ್ನು ಅಧಿಕ ಗೊಳಿಸಿದೆ.

ಸದ್ಯದಲ್ಲೇ ರಚನೆ ಆಗಲಿರುವ ಕೇಂದ್ರ ಸಚಿವ ಸಂಪುಟದಲ್ಲಿ ಕುಮಾರಸ್ವಾಮಿ ಸಚಿವರಾಗುವುದು ಬಹತೇಕ ಖಚಿತವಾಗಿದೆ. ಈ ಅವಕಾಶವನ್ನು ಬಳಸಿಕೊಂಡು ರಾಜ್ಯದಲ್ಲಿ ಮತ್ತೆ ತಮ್ಮ ಪಕ್ಷಕ್ಕೆ ಜೀವ ತುಂಬಲು ಕುಮಾರ ಸ್ವಾಮಿ ಸಿದ್ಧವಾಗುತ್ತಿದ್ದಾರೆ. ಬಿಜೆಪಿ ನಾಯಕತ್ವಕ್ಕೂ ಇದೇ ಬೇಕಾಗಿದೆ. ಕಾಂಗ್ರೆಸ್ ನಲ್ಲಿ ಪ್ರಬಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಾಬಲ್ಯ ಮಣಿಸಲು ಕುಮಾರಸ್ವಾಮಿ ಪ್ರಮುಖ ಅಸ್ತ್ರವಾಗುತ್ತಾರೆ ಎಂಬ ಅಚಲ ನಂಬಿಕೆ ಅವರಿಗಿದೆ. ಈ ಅವಶ್ಯಕತೆ ಪೂರೈಸುವವರೆಗೆ ಕುಮಾರಸ್ವಾಮಿ ಬಿಜೆಪಿ ದಿಲ್ಲಿ ನಾಯಕರ ಪಾಲಿಗೆ ಆಪದ್ಭಾಂದವನಾಗಿರುತ್ತಾರೆ. ಆದರೆ ಸದ್ಯ ಕೆಂದ್ರದ ಬಿಜೆಪಿ ಮೈತ್ರಿ ಕೂಟದ ಬೆಳವಣಿಗೆಗಳನ್ನು ನೋಡಿದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಮಿತ್ರ ಪಕ್ಷಗಳಾದ ತೆಲುಗು ದೇಶಂ ಹಾಗೂ ಸಂಯುಕ್ತ ದಳ ದ ಹಿಡಿತದಲ್ಲಿ ಸಿಕ್ಕಿದೆ.ಇತಿಹಾಸ ಗಮನಿಸಿದರೆ ಈ ಪಕ್ಷಗಳು ಭವಿಷ್ಯದಲ್ಲಿ ಬಿಜೆಪಿ ಜತೆಗೇ ಶಾಶ್ವತವಾಗಿ ನಿಲ್ಲುತ್ತವೆ ಎಂದೂ ಹೇಳಲು ಸಾಧ್ಯವಿಲ್ಲ. ಅಂತಹ ಸನ್ನಿವೇಶ ಎದುರಾದಾಗ ಜೆಡಿಎಸ್ ನಿಲುವೂ ಸ್ಥಳೀಯ ಆದ್ಯತೆಗಳಿಗೆ ಅನುಗುಣವಾಗಿ ಬದಲಾಗುವ ಸಾಧ್ಯತೆಗಳೂ ಇಲ್ಲದಿಲ್ಲ.

ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತೆ ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆಯಾದ ಮರು ಕ್ಷಣವೇ ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿಗಳನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತಿದ್ದಾರೆ. ಮಾಜಿ ಸಚಿವ ರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿಯವರನ್ನು ಅವರು ಸಂಪರ್ಕಿಸಿ ಮಾತನಾಡಿರುವುದು ಉದಾಹರಣೆ. ಮತ್ತೊಂದು ಕಡೆ ತಮ್ಮ ರಾಜೀನಾಮೆಯಿಂದ ತೆರವಾಗಲಿರುವ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ.

ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಪಿ ಯೋಗೀಶ್ವರ್ ಉತ್ಸುಕರಾಗಿದ್ದು ಮಾಜಿ ಪ್ರಧಾನಿ ದೇವೇಗೌಡರನ್ನೂ ಇತ್ತೀಚೆಗೆ ಭೇಟಿಯಾಗಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದೇ ಈ ಕ್ಷೇತ್ರವನ್ನು ಜೆಡಿಎಸ್ ಗೇ ಬಿಟ್ಟುಕೊಡುವುದು ಅನಿವಾರ್ಯವಾದರೆ ಯೊಗೀಶ್ವರ್ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಏನೇ ಇರಲಿ, ಬಿಜೆಪಿಯ ಎಲ್ಲ ಹಂತಗಳಲ್ಲಿ ಕುಮಾರಸ್ವಾಮಿ ಆವರಿಸಿಕೊಳ್ಳಲು ಆರಂಭಿಸಿರುವುದು ಸಹಜವಾಗೇ ಆ ಪಕ್ಷದ ನಾಯಕರನ್ನು ಕೆರಳಿಸಿದೆ. ಈಗ ಹೊಗೆ ಆಢುತ್ತಿರುವ ಅಸಮಧಾನಮುಂದಿನ ದಿನಗಳಲ್ಲಿ ಬೆಂಕಿಯಾದರೂ ಆಶ್ಚರ್ಯ ಏನಿಲ್ಲ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸಹಕಾರ ಇಲ್ಲದೇ ಬಿಜೆಪಿ 25 ಸ್ಥಾನಗಳನ್ನು ಗಳಿಸಿತ್ತು. ಈ ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಿಜೆಪಿಗೆ ಶಕ್ತಿ ಬಂದಿರುವುದಕ್ಕಿಂತ ಹೆಚ್ಚಾಗಿ ಸೊರಗದ್ದ ಜೆಡಿಎಸ್ ಗೆ ಬಿಜೆಪಿ ಜತೆಗಿನ ಮೈತ್ರಿ ಶಕ್ತಿ ನೀಡಿದೆ ಎಂದು ಮೂಲ ಬಿಜೆಪಿ ಮುಖಮಡರು ಪ್ರತಿಪಾದಿಸುತ್ತಿದ್ದಾರೆ. ಸದ್ಯದಲ್ಲೇ ದಿಲ್ಲಿ ವರಿಷ್ಟರನ್ನು ಭೇಟಿಯಾಗಿ ಈ ಕುರಿತು ವಿವರಣೆ ನೀಡಲಿದ್ದಾರೆ ಎಂದೂ ಗೊತ್ತಾಗಿದೆ.ಈ ಬೆಳವಣಿಗೆಯನ್ನು ಮುಂದಾಗಿಯೇ ಅಂದಾಜಿಸಿರುವ ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ಜತೆಗಿನ ಮೈತ್ರಿಯ ಲಾಭ ಪಡೆದು ರಾಜ್ಯದಲ್ಲಿ ಜೆಡಿಎಸ್ ಸಂಘಟನೆಯನ್ನು ಬಲಿಷ್ಟಗೊಳಿಸಲು ತಂತ್ರ ರೂಪಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಬೆಂಬಲಿಗರೇ ಎಂದು ಗುರುತಿಸಿಕೊಂಡಿದ್ದ ಕೆಲವು ಅಭ್ಯರ್ಥಿಗಳು ಸೋತು ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವುದರ ಹಿಂದೆ ಹೊಂದಾಣಿಕೆಯ ರಾಜಕಾರಣ ನಡೆದಿದೆ ಎಂಬ ಮಾತುಗಳು ಬಿಜೆಪಿಯಲ್ಲ್ಲೇ ಕೇಳಿ ಬರುತ್ತಿದೆ.ಕುಮಾರಸ್ವಾಮಿ ಮತ್ತು ವಿ. ಸೋಮಣ್ಣ ಅವರನ್ನು ಬಳಸಿಕೊಂಡು ತಮ್ಮನ್ನು ಮೂಲೆಗೊತ್ತುವ ಪ್ರಯತ್ನಗಳನ್ನು ಬಿಜೆಪಿ ದಿಲ್ಲಿ ವರಿಷ್ಠರು ಆರಂಭಿಸಿರುವ ಸೂಚನೆ ತಿಳಿದ ಯಡಿಯೂರಪ್ಪ ಜಾಗೃತರಾಗಿದ್ದಾರೆ.

ಅದರ ಮುಂದುವರಿದ ಭಾಗ ಎಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ.ಸಚಿವ ಸಿ.ಟಿ.ರವಿಯವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲು ಮುತುವರ್ಜಿ ವಹಿಸುವ ಮೂಲಕ ತಮ್ಮ ಮೇಲಿದ್ದ ಅಪವಾದದಿಂದ ಮುಕ್ತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಿ.ಟಿ.ರವಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗುವ ಸಾಧ್ಯತೆಗಳೂ ಇವೆ. ಈ ಮೂಲಕ ಪರ್ಯಾಯ ಒಕ್ಕಲಿಗ ನಾಯಕತ್ವ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸಿ.ಟಿ.ರವಿ ಸಂಘ ಪರಿವಾರಕ್ಕೂ ಹತ್ತಿರವಾದವರು ಎಂಬುದು ಹಾಗೂ ನಿರ್ದಿಷ್ಟ ಸಿದ್ಧಾಂತವೇ ಇಲ್ಲದ ಜೆಡಿಎಸ್ ಜತೆಗಿನ ಮೈತ್ರಿ ಸಂಘ ಪರಿವಾರಕ್ಕೂ ಇಷ್ಟವಿಲ್ಲ ಎಂಬುದೂ ಇಲ್ಲಿ ಗಮನಾರ್ಹ ಅಂಶ.


Share