ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಎನ್ ಡಿಎ ಮೈತ್ರಿಕೂಟದ ಪ್ರಧಾನಿಯಾಗಿ ನರೇಂದ್ರ ಮೋದಿ ಇದೇ ಭಾನುವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಕುರಿತು ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಭಾರತದ ಆಹ್ವಾನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ INDIA Out ಅಭಿಯಾನದ ಮೂಲಕ ಭಾರತ ಕೆಂಗಣ್ಣಿಗೆ ಗುರಿಯಾಗಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರಿಗೂ ಭಾರತ ಆಹ್ವಾನ ನೀಡಿದ್ದು, ಇದೇ ಭಾನುವಾರ ಜೂನ್ 9ರಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಲಾಗಿದೆ. ಮುಯಿಝು ಕೂಡ ಆಹ್ವಾನ ಸ್ವೀಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಕಾರ್ಯಕ್ರಮಕ್ಕೆ ಮುಯಿಝು ಮಾತ್ರವಲ್ಲದೇ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಮತ್ತು ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಸೇರಿದಂತೆ ದಕ್ಷಿಣ ಏಷ್ಯಾದ ಗಣ್ಯಾತಿಗಣ್ಯ ನಾಯಕರು ಉಪಸ್ಥಿತರಿರಲಿದ್ದಾರೆ ಎಂದು ಹೇಳಲಾಗಿದೆ.
ಮುಯಿಝು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ ಭಾರತದೊಂದಿಗಿವ ಸಂಬಂಧ ಹಳಸಿದ್ದು, ಪ್ರಮುಖವಾಗಿ ಮುಯಿಝು ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ಮಾಲ್ಡೀವ್ಸ್ ನಲ್ಲಿರುವ ಭಾರತೀಯ ಸೇನೆಯನ್ನು ವಾಪಸ್ ಕಳುಹಿಸಲು ಮುಯಿಝು ಆದೇಶಸಿದ್ದು, ಈ ಕಾರ್ಯ ಕೂಡ ಚಾಲನೆ ಪಡೆದಿದೆ. ಅಲ್ಲದೆ ಮುಯಿಜು ಈ ನಡೆ ಬೆನ್ನಲ್ಲೇ ಭಾರತದಲ್ಲಿ ಮುಯಿಝು ವಿರುದ್ಧದ ಅಭಿಯಾನ, ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಕೂಡ ಜೋರಾಗಿರುವ ಹೊತ್ತಲ್ಲೇ ಭಾರತದ ಆಹ್ವಾನ ಗಮನ ಸೆಳೆದಿದಿದೆ.