ಅಂಬೇಡ್ಕರ್ ಸಂವಿಧಾನ ಶಿಲ್ಪಿ ಮಾತ್ರವಲ್ಲ ಸಮಾಜ ಸುಧಾರಕರೂ ಹೌದು: ಗೌರವ್ ಗುಪ್ತಾ
ಬೆಂಗಳೂರು, ಜೂ. 6, 2024: ಸಮಾಜದಲ್ಲಿ ಎಲ್ಲಾ ವರ್ಗದವರೂ ಸಮನಾಗಿ ಬಾಳಬೇಕು ಎಂಬ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ನೀಡುವುದರ ಜತೆಗೆ ಪ್ರಬುದ್ಧ ಚಿಂತರಾಗಿಯೂ ಸುಧಾರಣೆಗೆ ಪ್ರಯತ್ನಿಸಿದ್ದರು ಎಂದು ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯೂ ಆಗಿರುವ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಹೇಳಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಹಾಗೂ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದ ಸಹಯೋಗದೊಂದಿಗೆ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಗುರುವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಯೊಂದಿಗೆ ಭಾರತವನ್ನು ಮುನ್ನಡೆಸಬೇಕು ಎಂದರು.
ಮಳೆ ಕೊರತೆ ನಡುವೆಯೂ ಕೆಪಿಸಿಎಲ್ ಈ ಬಾರಿ ಹೆಚ್ಚು ವಿದ್ಯುತ್ ಉತ್ಪಾದನೆ ಮೂಲಕ ವಿದ್ಯುತ್ ಸಮಸ್ಯೆ ಕಾಡದಂತೆ ನೋಡಿಕೊಂಡಿದೆ. ಮುಂದಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸಿ ನಿಗಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದ್ದು, ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಇದೇ ವೇಳೆ ಖ್ಯಾತ ಚಿಂತಕರಾದ ಡಾ. ಅನುಪಮ ಎಚ್.ಎಸ್. ಕವಲಕ್ಕಿ ಹಾಗೂ ಹಂಪಿ ವಿವಿ ಇತಿಹಾಸ ವಿಭಾಗದ ಪ್ರೊಫೆಸರ್ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಅವರು ಅಂಬೇಡ್ಕರ್ ಅವರ ಜೀವನ, ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಕೆಪಿಸಿಎಲ್ ಸಿಬ್ಬಂದಿಯ ಮಕ್ಕಳಿಗೆ ಮೂರು ಗ್ರಾಂನ ಚಿನ್ನದ ಪದಕ ನೀಡಿ ಪುರಸ್ಕರಿಸಲಾಯಿತು.
ಕೆಪಿಸಿಎಲ್ ಮಾನವ ಸಂಪನ್ಮೂಲ ನಿರ್ದೇಶಕರಾಗಿರುವ ನಾಗರಾಜ ಸಿ., ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕರಾಗಿರುವ ಸಿ.ಎಂ.ದಿವಾಕರ್, ಆಡಳಿತ ಮತ್ತು ಮಾ್ನವ ಸಂಪನ್ಮೂಲ ಪ್ರಧಾನ ಪ್ರಬಂಧಕರಾದ ಚಂದ್ರಶೇಖರ್, ಕೇಂದ್ರ ಸಂಘದ ಅಧ್ಯಕ್ಷ ಭೀಮಯ್ಯ ನಾಯಕ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಸ್ಥಳೀಯ ಸಮಿತಿ ಅಧ್ಯಕ್ಷ ಕೆ.ಮಂಜು, ಕಾರ್ಯದರ್ಶಿ ಗೋವಿಂದು ಮತ್ತಿತರರು ಪಾಲ್ಗೊಂಡಿದ್ದರು.
ಫೋಟೋ ಕ್ಯಾಪ್ಷನ್
ಕೆಪಿಸಿಎಲ್ ಹಾಗೂ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಉದ್ಘಾಟಿಸಿದರು. ಖ್ಯಾತ ಚಿಂತಕರಾದ ಡಾ. ಅನುಪಮ ಎಚ್.ಎಸ್. ಕವಲಕ್ಕಿ, ಹಂಪಿ ವಿವಿ ಇತಿಹಾಸ ವಿಭಾಗದ ಪ್ರೊಫೆಸರ್ ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಕೆಪಿಸಿಎಲ್ ಮಾನವ ಸಂಪನ್ಮೂಲ ನಿರ್ದೇಶಕರಾಗಿರುವ ನಾಗರಾಜ ಸಿ., ಹಣಕಾಸು ನಿರ್ದೇಶಕರಾಗಿರುವ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕರಾಗಿರುವ ಸಿ.ಎಂ.ದಿವಾಕರ್ ಮತ್ತಿತರರು ಪಾಲ್ಗೊಂಡಿದ್ದರು.