ಕುಮಟಾ :-ಕೃಷಿ ಪ್ರಾಮುಖ್ಯತೆಯು ಇಂದು ಹೆಚ್ಚು ಗಮನ ಸೆಳೆಯುತ್ತಿದ್ದು ಆಹಾರ, ಆಶ್ರಯ ಮತ್ತು ಜಾನುವಾರುಗಳ ಮೇವಿಗಾಗಿ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಯುವಕರು, ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ವಹಿಸಿ ತೊಡಗಿಸಿಕೊಳ್ಳಬೇಕು. ಸಾವಯವ ಕೃಷಿಯಿಂದ ಉತ್ತಮ ಬೆಳೆಗಳನ್ನು ಬೆಳೆಯಲು ಸಾಧ್ಯ ಎಂದು ಪ್ರಗತಿಪರ ರೈತರಾದ ಶ್ರೀ.ನಾಗರಾಜ ನಾಯ್ಕ ರವರು ತಿಳಿಸಿದರು. ಅವರು ಸವಿ ಫೌಂಡೇಷನ್ ಮೂಡುಬಿದ್ರೆ ಆಶ್ರಯದಲ್ಲಿ ನಡೆದ ಡಾ. ಸ್ವಾಮಿನಾಥನ್ ಸ್ಮರಣಾರ್ಥ ‘ಸುಸ್ಥಿರ ಕೃಷಿಯ ಬಗ್ಗೆ ಅರಿವು” ಕಾರ್ಯಕ್ರಮದಲ್ಲಿ ಸರಸ್ವತಿ ಪದವಿಪೂರ್ವ ಕಾಲೇಜು ಕುಮಟಾ, ದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. 600 ಕ್ಕಿಂತ ಹೆಚ್ಚಿನ ಭತ್ತದ ತಳಿಗಳನ್ನು ಅವರು ಸಂರಕ್ಷಿಸುತ್ತಿದ್ದು ಸ್ಥಳೀಯರಿಗೆ ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಾಯ ನೀಡುವುದಾಗಿ ತಿಳಿಸಿದರು. ರಾಸಾಯನಿಕ ಗೊಬ್ಬರ ಬಳಸದೇ ಅತ್ಯುತ್ತಮ ಭತ್ತದ ತಳಿಗಳನ್ನು ಬೆಳೆಸಬಹುದು ಎಂದು ತಿಳಿಸಿದ ಅವರು ಕಗ್ಗ ಸೇರಿ ವಿವಿಧ ತಳಿಗಳನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಿದರು.

ಡಾ. ಸಂದೀಪ್ ನಾಯಕ, ಅಧ್ಯಕ್ಷರು, ಸವಿ ಫೌಂಡೇಷನ್ ರವರು ಡಾ. ಸ್ವಾಮಿನಾಥನ್ ರವರು ಕೃಷಿಯ ಬಗ್ಗೆ ನಡೆಸಿದ ಸಂಶೋಧನೆಗಳ ಬಗ್ಗೆ ತಿಳಿಸಿ ಅವರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬಲ್ಲದು ಎಂದು ತಿಳಿಸಿದರು. ಪ್ರಾಂಶುಪಾಲ ಶ್ರೀ ಕಿರಣ್ ಭಟ್ಟ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭೂಮಿಯ ಜನಸಂಖ್ಯೆ ಬೆಳೆಯುತ್ತಿರುವಾಗ ಸಂಪನ್ಮೂಲ ಕೊರತೆಯ ಬೆದರಿಕೆಯೊಂದಿಗೆ ಆಹಾರದ ಬೇಡಿಕೆಯು ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಕೃಷಿಯ ಕುರಿತು ಒಲವು ಮೂಡಿಸುತ್ತಿರುವ ಕಾರ್ಯಕ್ರಮವನ್ನು ಸಂಘಟಿಸಿದ ಸವಿ ಫೌಂಡೇಷನ್ನ ಕಾರ್ಯಕ್ರಮವನ್ನು ಶ್ಲಾಘಿಸಿದರು. ಟ್ರಸ್ಟಿ ಡಾ. ರತನ್ ಗಾಂಪ್ಟರ್ ಸವಿ ಫೌಂಡೇಷನ್ ಉದ್ದೇಶ ಗಳನ್ನು ತಿಳಿಸಿ ಸ್ವಾಗತಿಸಿದರು. ಶ್ರೀ. ಗುರುರಾಜ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದರು ಹಾಗೂ ವಿದ್ಯಾರ್ಥಿನಿ ಸ್ನೇಹ ಕಾರ್ಯಕ್ರಮವನ್ನು ನಿರೂಪಿಸಿದರು.ಶಿಕ್ಷಕಿ ಪೂಜಾ ನಾಗರಕಟ್ಟೆ ವಂದಿಸಿದರು.