ಬೆಂಗಳೂರು: ಲೋಕಸಭಾ ಚುನಾವಣೆ ಜೊತೆಗೆ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ್ ನಾಯಕ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ನರಸಿಂಹ ನಾಯಕ(ರಾಜುಗೌಡ) ಅವರ ವಿರುದ್ಧ ದಿ. ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು 18320 ಮಂತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರಾಜಾ ವೇಣುಗೋಪಾಲ್ ನಾಯಕ ಅವರು ಒಟ್ಟು 114886 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ(ರಾಜುಗೌಡ) ಅವರು 96566 ಮತಗಳನ್ನು ಪಡೆದಿದ್ದಾರೆ.ಕಳೆದ ಫೆಬ್ರವರಿಯಲ್ಲಿ ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಲೋಕಸಭೆ ಚುನಾವಣೆ ಜೊತೆಗೆ ಉಪ ಚುನಾವಣೆ ನಡೆದಿತ್ತು. ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸಿತ್ತು ಮತ್ತು ಬಿಜೆಪಿ ಸಹ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪ್ರಚಾರ ನಡೆಸಿದ್ದರು.
ಕಾಂಗ್ರೆಸ್ ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್ ಅವರನ್ನೇ ಕಣಕ್ಕೆ ಇಳಿಸಿ ಅನುಕಂಪದ ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.
2023ರಲ್ಲಿ ನಡೆದ ವಿಧಾಸಭೆ ಚುನಾವಣೆಯಲ್ಲಿ ರಾಜಾ ವೇಣುಗೋಪಾಲ ನಾಯಕ್ ತಂದೆ, ದಿ. ರಾಜಾ ವೆಂಕಟಪ್ಪ ನಾಯಕ್ ಅವರು 1,13,559 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಬಿಜೆಪಿಯ ರಾಜುಗೌಡ 88,336 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ರಾಜಾ ವೆಂಕಟಪ್ಪ ನಾಯಕ್ ಅವರು ರಾಜುಗೌಡ ಅವರನ್ನು 25 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.