ಈಗ ಅವರು ಬ್ಯಾಗ್ ಪ್ಯಾಕಪ್ ಮಾಡಿಕೊಂಡು ಹೊರಡಬೇಕು: ಕಾಂಗ್ರೆಸ್ ಅಭ್ಯರ್ಥಿಗೆ ಕಂಗನಾ ತಿರುಗೇಟು

ಈಗ ಅವರು ಬ್ಯಾಗ್ ಪ್ಯಾಕಪ್ ಮಾಡಿಕೊಂಡು ಹೊರಡಬೇಕು: ಕಾಂಗ್ರೆಸ್ ಅಭ್ಯರ್ಥಿಗೆ ಕಂಗನಾ ತಿರುಗೇಟು

Share

ಮಂಡಿ(ಹಿಮಾಚಲ ಪ್ರದೇಶ): ಚುನಾವಣಾ ಆಯೋಗದ ಇತ್ತೀಚಿನ ವರದಿ ಪ್ರಕಾರ, ಹಿಮಾಚಲ ಪ್ರದೇಶದ ಮಂಡಿಯಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಾಲಿವುಡ್ ತಾರೆ ಕಂಗನಾ ರಾನಾವತ್ ಮುನ್ನಡೆ ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬ್ಯಾಗ್ ಪ್ಯಾಕಪ್ ಮಾಡಿಕೊಂಡು ಹೊರಡಲಿ ಎಂದಿದ್ದಾರೆ.

ಬಿಜೆಪಿ ಅಭ್ಯರ್ಥಿ ಚುನಾವಣೆ ಮುಗಿದ ನಂತರ ಮಂಡಿಯನ್ನು ಬಿಟ್ಟು ಮುಂಬೈಗೆ ಪ್ಯಾಕಪ್ ಮಾಡುತ್ತಾರೆ ಎಂದು ವಿಕ್ರಮಾದಿತ್ಯ ಸಿಂಗ್ ಟೀಕಿಸಿದ್ದರು. ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಕಂಗನಾ ಈಗ ಯಾರು ಪ್ಯಾಕಪ್ ಮಾಡುತ್ತಾರೆಂದು ನೋಡಿ ಎಂದಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶ ಪ್ರಕಾರ ಕಂಗನಾ 65,000 ಮತಗಳ ಅಂತರದಿಂದ ಈ ಸ್ಥಾನದಿಂದ ಮುನ್ನಡೆ ಸಾಧಿಸಿದ್ದಾರೆ.ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಕಂಗನಾ, ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡಿದರೆ ಅದರ ಪರಿಣಾಮವನ್ನು ಅವರು ಅನುಭವಿಸಬೇಕಾಗುತ್ತದೆ ಎಂದು ಇಂದಿನ ಫಲಿತಾಂಶ ನೋಡಿದರೆ ಸ್ಪಷ್ಟವಾಗುತ್ತದೆ ಎಂದರು.

ಹಿಮಾಚಲ ಪ್ರದೇಶ ನನ್ನ ‘ಜನ್ಮಭೂಮಿ’. ಇಲ್ಲಿನ ಜನರ ಸೇವೆ ನಾನು ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಲ್ಲಿ ನಾನು ಸೈನಿಕನಾಗಿ ಕೆಲಸ ಮಾಡುತ್ತೇನೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್.’ ನಾನು ಎಲ್ಲಿಯೂ ಹೋಗುತ್ತಿಲ್ಲ, ಬೇರೆಯವರು ತಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಬೇಕಾಗಬಹುದು, ಆದರೆ ನಾನು ಇಲ್ಲೇ ಇರುತ್ತೇನೆ ಎಂದರು.ಇದಕ್ಕೂ ಮುನ್ನ ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ತಾಯಿಯ ಜೊತೆ ದೇವರಿಗೆ ಪೂಜೆ ಸಲ್ಲಿಸುತ್ತಿರುವ ವಿಡಿಯೊವನ್ನು ಹಂಚಿಕೊಂಡ ನಟಿ, ತಾಯಿ ದೇವರ ರೂಪ, ಇಂದು ನನ್ನ ತಾಯಿ ನನಗೆ ಮೊಸರು ಮತ್ತು ಸಕ್ಕರೆ ತಿನ್ನಿಸುತ್ತಿದ್ದಾರೆ ಎಂದು ಬರೆದಿದ್ದಾರೆ.


Share