ಮೈಸೂರು: ಗೃಹಪ್ರವೇಶ ಸಮಾರಂಭದಲ್ಲಿ ಆಹಾರ ಸೇವಿಸಿ ಮಹಿಳೆ ಸಾವು, 39 ಮಂದಿ ಅಸ್ವಸ್ಥ

ಮೈಸೂರು: ಗೃಹಪ್ರವೇಶ ಸಮಾರಂಭದಲ್ಲಿ ಆಹಾರ ಸೇವಿಸಿ ಮಹಿಳೆ ಸಾವು, 39 ಮಂದಿ ಅಸ್ವಸ್ಥ

Share

ಮೈಸೂರು: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಮಾರ್ಬಳ್ಳಿ ಗ್ರಾಮದಲ್ಲಿ ಗೃಹಪ್ರವೇಶ ಸಮಾರಂಭದಲ್ಲಿ ಆಹಾರ ಸೇವಿಸಿದ 65 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, 39 ಗ್ರಾಮಸ್ಥರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಧಿಕಾರಿಗಳ ಪ್ರಕಾರ, ಗ್ರಾಮದ 65 ವರ್ಷದ ಶಿವಮ್ಮ ಎಂಬುವವರು ಸೋಮವಾರ ನಿಧನರಾಗಿದ್ದಾರೆ. ಮಾರ್ಬಳ್ಳಿ ಗ್ರಾಮದಲ್ಲಿ ಮೇ 31ರಂದು ಗೃಹಪ್ರವೇಶ ಕಾರ್ಯಕ್ರಮ ನಡೆದಿದ್ದು, ಸಮಾರಂಭಕ್ಕೆ ಆಗಮಿಸಿದ್ದ 350ಕ್ಕೂ ಹೆಚ್ಚು ಮಂದಿ ಆಹಾರ ಸೇವಿಸಿದ್ದರು. ಆದರೆ, ಜೂನ್ 2ರಂದು 39 ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಕೆಲವರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೆ, 27 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಪಿಸಿ ಕುಮಾರಸ್ವಾಮಿ ಮಾತನಾಡಿ, ಗ್ರಾಮಸ್ಥರ ವೈದ್ಯಕೀಯ ತಪಾಸಣೆ ನಡೆಸಲು ಮಾರ್ಬಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವ ಆರೋಗ್ಯ ಕೇಂದ್ರವು ದಿನದ 24 ಗಂಟೆಯೂ ಕೆಲಸ ಮಾಡುತ್ತದೆ. ಕಾಲರಾ ರೋಗಲಕ್ಷಣಗಳು ಕಂಡುಬಂದಿಲ್ಲ ಎಂದು ಹೇಳಿದರು.350ಕ್ಕೂ ಹೆಚ್ಚು ಮಂದಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಊಟ ಮಾಡಿದ್ದಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಗ್ರಾಮಸ್ಥರು ತಿಳಿಸಿದ್ದಾರೆ. ಸಮಾರಂಭದಲ್ಲಿ ಆಹಾರ ಸೇವಿಸಿದ ಕಾರಣದಿಂದ ಅಥವಾ ಗ್ರಾಮದಲ್ಲಿ ಸರಬರಾಜು ಮಾಡಿದ ಕಲುಷಿತ ನೀರು ಕುಡಿದ ಕಾರಣದಿಂದ ಈ ಘಟನೆ ಸಂಭವಿಸಿದೆಯೇ ಎಂಬುದು ನಮಗೆ ತಿಳಿದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದೇ ವೇಳೆ ಗ್ರಾಮಕ್ಕೆ ಭೇಟಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಹಾರ ಮತ್ತು ಟ್ಯಾಂಕ್‌ಗಳಲ್ಲಿನ ನೀರಿನ ಮಾದರಿಗಳನ್ನು ಪರಿಶೀಲನೆಗಾಗಿ ಸಂಗ್ರಹಿಸಿದ್ದಾರೆ.


Share