ಮೈಸೂರು: ಮಂಗಳವಾರ ಹೊರಬೀಳಲಿರುವ ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ದೇಶವೇ ಕುತೂಹಲದಿಂದ ಕಾಯುತ್ತಿರುವಾಗ, ಮೈಸೂರಿನಲ್ಲಿ ಶ್ವಾನವೊಂದು ನುಡಿದಿರುವ ಭವಿಷ್ಯ ಇದೀಗ ಮತದಾರರನ್ನು ಆಕರ್ಷಿಸಿದೆ. ಗಿಳಿಗಳು ಮತ್ತು ನಾಯಿಗಳಿಂದ ಭವಿಷ್ಯ ಹೇಳಿಸುವುದು ಹೊಸದಲ್ಲದಿದ್ದರೂ, ಇಲ್ಲಿನ ಶ್ವಾನವೊಂದು ಮೈಸೂರು ಮತ್ತು ಕೇಂದ್ರದಲ್ಲಿ ಗೆಲುವು ಯಾರಿಗೆ ಎಂಬುದರ ಕುರಿತು ಹೇಳಿದೆ.
ಮೈಸೂರಿನ ಕೆಟಿ ಸ್ಟ್ರೀಟ್‌ನಲ್ಲಿರುವ ಕಾಲಭೈರವೇಶ್ವರ ದೇವಸ್ಥಾನದಲ್ಲಿ ನೆಲೆಸಿರುವ ಎರಡು ವರ್ಷದ ಭೈರವ ಎಂಬ ನಾಯಿ ಇದೀಗ ಚುನಾವಣಾ ಫಲಿತಾಂಶ ಕುರಿತಂತೆ ಭವಿಷ್ಯ ನುಡಿದಿದ್ದು, ಸುದ್ದಿ ಮಾಡಿದೆ.
ಭೈರವನ ಮಾಲೀಕ ಗೋಪಿನಾಥ್ ಚುನಾವಣಾ ಫಲಿತಾಂಶವನ್ನು ಊಹಿಸಲು ಪ್ರಯೋಗ ನಡೆಸಿದ್ದಾರೆ. ಭೈರವನ ಮುಂದೆ ಪ್ರಮುಖ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳನ್ನು ಇರಿಸಿ ಅವುಗಳಲ್ಲಿ ಯಾರಿಗೆ ಗೆಲುವು ಎಂಬುದನ್ನು ನಾಯಿಯು ಆಯ್ಕೆ ಮಾಡುವಂತೆ ಹೇಳಿದ್ದಾರೆ.
ಕೇಂದ್ರದಲ್ಲಿ ಅಧಿಕಾರ ಯಾರಿಗೆ ಎಂಬ ಕುರಿತಾಗಿ ಭೈರವನ ಮುಂದೆ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿಯವರ ಭಾವಚಿತ್ರಗಳನ್ನು ನೀಡಲಾಯಿತು. ಈ ವೇಳೆ ಭೈರವ ನರೇಂದ್ರ ಮೋದಿಯವರ ಭಾವಚಿತ್ರವನ್ನು ಆಯ್ಕೆ ಮಾಡಿದೆ. ಈ ಭವಿಷ್ಯವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಗೆಲುವಿನ ಮುನ್ಸೂಚನೆ ನೀಡಿದ ಚುನಾವಣೋತ್ತರ ಸಮೀಕ್ಷೆಗಳೊಂದಿಗೆ ಹೊಂದಿಕೆಯಾಗುತ್ತದೆ.
ಬಳಿಕ ಗೋಪಿನಾಥ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಯಾರಿಗೆ ಎಂಬ ಕುರಿತು ಭೈರವನನ್ನು ಕೇಳಿದ್ದಾರೆ. ಈ ಪ್ರದೇಶದಲ್ಲಿ ಗಮನ ಸೆಳೆದಿರುವ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಮತ್ತು ಅವರ ಪ್ರತಿಸ್ಪರ್ಧಿ ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಭಾವಚಿತ್ರವನ್ನು ನಾಯಿಗೆ ತೋರಿಸಿದ್ದಾರೆ.ಭೈರವ ಯದುವೀರ್ ಅವರ ಭಾವಚಿತ್ರವನ್ನು ಆರಿಸಿಕೊಂಡಿದೆ. ಈ ಆಯ್ಕೆಯು ಸ್ಥಳೀಯ ಜನರಲ್ಲಿ ಸಾಕಷ್ಟು ಆಸಕ್ತಿ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ. ಭೈರವನ ಭವಿಷ್ಯದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿರುವಾಗ, ಗ್ರಾಮೀಣ ಭಾಗಗಳಲ್ಲಿ ನಡೆಯುವ ಇಂತಹ ಪ್ರಾಣಿಗಳು ಮತ್ತು ಪಕ್ಷಿಗಳು ಬಳಸಿ ಭವಿಷ್ಯ ನುಡಿಸುವುದು ಕುತೂಹಲಕಾರಿಯಾಗಿ ಮಾರ್ಪಟ್ಟಿದೆ.