ಅಂಕೋಲಾ ತಾಲೂಕಿನ ಬೆಳಾಬಂದರಿನ ನಿವಾಸಿ ಸಾಮಾಜಿಕ ಕಾರ್ಯಕರ್ತ,ನಾಮಧಾರಿ ಸಮಾಜದ ಮುಖಂಡ ನಾರಾಯಣ ಜಾನು ನಾಯ್ಕ (79) ಅನಾರೋಗ್ಯದಿಂದ ರವಿವಾರ ಮಧ್ಯಾಹ್ನ 2.30 ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ಬೊಬ್ರುವಾಡ ಗ್ರಾಪಂ ವ್ಯಾಪ್ತಿಯ ಬೆಳಾಬಂದರಿನಲ್ಲಿ 17 ಮಾರ್ಚ್ 1946 ರಂದು ನಾಗಮ್ಮ ಮತ್ತು ಜಾನು ತಿಮ್ಮಣ್ಣ ನಾಯ್ಕ ದಂಪತಿಗಳ ಪ್ರಥಮ ಪುತ್ರನಾಗಿ ಜನಿಸಿದ ನಾರಾಯಣ ನಾಯ್ಕ ತಾಲೂಕಿನ ಯಶಸ್ವಿ ಉದ್ದಿಮೆದಾರರಾಗಿ ಗುರುತಿಸಿಕೊಂಡಿದ್ದರು. ತಾಲೂಕಿನಾದ್ಯಂತ ಸಾಮಾಜಿಕ ಕೈಂಕರ್ಯಗಳಲ್ಲಿ ಗುರುತಿಸಿಕೊಂಡಿದ್ದ ಇವರು ನಾಮಧಾರಿ ಸಮಾಜದ ಪ್ರಭಾವಿ ಮುಖಂಡರಾಗಿದ್ದರು, ಸಮಾಜದ ಕಾರ್ಯಕ್ರಮಗಳಲ್ಲಿ ಸದಾ ತೊಡಗಿಸಿಕೊಂಡು ಸಮಾಜವನ್ನು ಕಟ್ಟಲು ಶ್ರಮಿಸಿದ್ದರು.ತಾಲೂಕಿನಲ್ಲಿ ಈ ಹಿಂದಿನಿಂದಲೂ ನೂತನವಾಗಿ ಆಗಮಿಸುವ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಇಂಡಿಯನ್ ಆಯಿಲ್,ಮಾಣಿಕ್ಬಾಗ್,ಭಾರತ್ ಆಟೋಮೊಮಾರುತಿ ಸುಜುಕಿ ಕಂಪನಿಗಳು ತಾಲೂಕಿನಲ್ಲಿ ನೆಲೆಯೂರಲು ಪ್ರಮುಖ ಪಾತ್ರವಹಿಸಿದ್ದವರು,ಹಾಗೆಯೇ ತಾಲೂಕಿನ ಪ್ರಮುಖ ದೇವಾಲಯಗಳನ್ನು ನಿರ್ಮಿಸುವಲ್ಲಿಯೂ ಮುಂದಾಳತ್ವ ವಹಿಸಿದ್ದ ಇವರು, ಶಿಕ್ಷಣ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ನಾರಾಯಣ ನಾಯ್ಕರು ಅಕಾಲಿಕ ಮರಣ ಹೊಂದಿದ ದ್ವಿತೀಯ ಪುತ್ರನ ನೆನಪಿಗಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದರು, ಅಂದಿನಿಂದ ಇಂದಿನವರೆಗೂ ಶಾಲಾ ಮಕ್ಕಳಿಗೆ ಪಠ್ಯ-ಪುಸ್ತಕಗಳನ್ನು ನೀಡಿ ಬಡಮಕ್ಕಳಲ್ಲಿ ಅಗಲಿದ ದ್ವಿತೀಯ ಪುತ್ರನನ್ನು ಕಂಡವರು ತಾಲೂಕಿನಲ್ಲಿ ಕೈಗಾರಿಕಾ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಸಹಕರಿಸಿ ಸಾವಿರಾರು ಮಕ್ಕಳಿಗೆ ಶೈಕ್ಷಣಿಕ ದಾರಿ ತೋರಿದವರು,ಹೀಗೆಯೇ ಜೀವಿತಾವಧಿಯನ್ನು ಸಾಮಾಜಿಕ ಕಾರ್ಯಗಳಿಗೆ ಮುಡಿಪಾಗಿಟ್ಟಿದ್ದ ಇವರು ರವಿವಾರ ಮಧ್ಯಾಹ್ನ 2.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ಮೃತರು ಪತ್ನಿ ಲಕ್ಷ್ಮಿ ನಾಯ್ಕ,ಮಕ್ಕಳಾದ ಭಾರತಿ ನಾಯ್ಕ,ರೇಖಾ ನಾಯ್ಕ,ಸುಜೀತ್ ನಾಯ್ಕ,ಪದ್ಮಾವತಿ ನಾಯ್ಕ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ, ಇವರ ಅಗಲಿಕೆಗೆ ಅಭಿಮಾನಿಗಳು ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.