ಬೆಳಗಾವಿ: ಮುಂಗಾರು ಆರಂಭದಿಂದಲೂ ರಾಜ್ಯದಲ್ಲಿ ಸಮೃದ್ಧ ಮಳೆಯಾಗುತ್ತಿದ್ದು, ಕರ್ನಾಟಕದ ಗಡಿಯಲ್ಲಿರುವ ಅಂಬೋಲಿ ಬಳಿಯ ಪ್ರಶಾಂತ ಪಶ್ಚಿಮ ಘಟ್ಟಗಳಲ್ಲಿರುವ ಕುಂಬ್ವಾಡೆ ಜಲಪಾತ (ಬಾಬಾ ಜಲಪಾತ) ಭೋರ್ಗರೆಯುತ್ತಿದೆ. ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ರುದ್ರ ರಮಣೀಯ ದೃಶ್ಯ ಕಂಡು ಪ್ರವಾಸಿಗರು ಫುಲ್ ಖುಷ್ ಆಗುತ್ತಿದ್ದಾರೆ.
ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಇದು ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಎನ್‌ಸಿಪಿ ಹಿರಿಯ ನಾಯಕ ದಿವಂಗತ ಬಾಬಾಸಾಹೇಬ್ ಕುಪೇಕರ್ ಅವರ ಒಡೆತನದಲ್ಲಿರುವ ಖಾಸಗಿ ಭೂಮಿಯಲ್ಲಿ ಈ ಜಲಪಾತವಿದ್ದು, ಜಲಪಾತಕ್ಕೆ ವಾರಾಂತ್ಯದ ವೇಳೆ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುತ್ತಿದ್ದಾರೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿನ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ವ್ಯಾಪಾರಸ್ಥರು ಸಂತಸಗೊಂಡಿದ್ದಾರೆಈ ಹಿಂದೆ ಭೂಕುಸಿತ ಪರಿಣಾಮ ಬಾಬಾಸಾಹೇಬ್ ಕುಪೇಕರ್ ಅವರ ಕುಟುಂಬ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರು. ನಿರ್ಬಂಧದ ಹೊರತಾಗಿಯೂ ಪ್ರವಾಸಿಗರು ಸ್ಥಳಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಿರಲಿಲ್ಲ. ಬಳಿಕ ಕುಪೇಕರ್ ಅವರ ಕುಟುಂಬ, ಸ್ಥಳದಲ್ಲಿ ಸೂಕ್ತ ರಸ್ತೆ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿತು.
ಪ್ರವಾಸಿ ತಾಣದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಲ್ಲಿ ಒಬ್ಬರಾದ ಮಧುಕರ ಗಾವಡೆ ಮಾತನಾಡಿ, ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಭೂಕುಸಿತಗಳು ಸಾಮಾನ್ಯವಾಗಿದೆ. ಸ್ಥಳದಲ್ಲಿ ನಿರ್ಬಂಧ ಹೇರಿದ ಬಳಿಕ ಸ್ಥಳಕ್ಕೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗತೊಡಗಿತ್ತು ಎಂದು ಹೇಳಿದ್ದಾರೆ.
ಜಲಪಾತದ ಸುತ್ತಮುತ್ತಲಿನ ಭೂದೃಶ್ಯವು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ, ಪರಿಸರ ಪ್ರಿಯಕರಿಗೆ ಮತ್ತು ಛಾಯಾಗ್ರಾಹಕರಿಗೆ ಫೋಟೋ ತೆಗೆಯಲು ಅತ್ಯುತ್ತಮ ಅವಕಾಶ ನೀಡುತ್ತದೆ ಎಂದು ತಿಳಿಸಿದ್ದಾರೆ.