ಕನ್ಯಾಕುಮಾರಿ: ಇಲ್ಲಿನ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಇಂದು ಶನಿವಾರ ಸೂರ್ಯೋದಯದ ವೇಳೆ ‘ಸೂರ್ಯ ಅರ್ಘ್ಯ’ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಮತ್ತು ಅಂತಿಮ ದಿನದ ಧ್ಯಾನವನ್ನು ಆರಂಭಿಸಿದರು.
ಪ್ರಧಾನಿ ಮೋದಿ ಅವರು ‘ಸೂರ್ಯ ಅರ್ಘ್ಯ’ವನ್ನು ನೀಡಿ ಸರ್ವಶಕ್ತನಿಗೆ ನಮಸ್ಕಾರಗಳನ್ನು ಮಾಡುವ ಮೂಲಕ ಆಧ್ಯಾತ್ಮಕ ಆಚರಣೆಯನ್ನು ಆರಂಭಿಸಿದರು. ಸಾಂಪ್ರದಾಯಿಕವಾಗಿ ತಾಮ್ರದ ಚೆಂಬಿನ ಪಾತ್ರೆಯ ಮೂಲಕ ಸ್ವಲ್ಪ ನೀರನ್ನು ಸಮುದ್ರಕ್ಕೆ ನೈವೇದ್ಯವಾಗಿ (ಅರ್ಘ್ಯ) ಸುರಿದು ಪ್ರಾರ್ಥನಾ ಮಣಿ ಅಂದರೆ ಜಪ ಮಾಲೆ ಕೈಯಲ್ಲಿ ಹಿಡಿದು ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಮೋದಿ ಅವರು ಕೇಸರಿ ವಸ್ತ್ರವನ್ನು ಧರಿಸಿದ್ದರು. ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಕೈಯಲ್ಲಿ ‘ಜಪ ಮಾಲೆ’ ಹಿಡಿದುಕೊಂಡು ಮಂಟಪದ ಸುತ್ತಲೂ ನಡೆದರು.
ಕನ್ಯಾಕುಮಾರಿಯು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಸ್ಮಾರಕವು ತೀರದ ಸಮೀಪವಿರುವ ಒಂದು ಸಣ್ಣ ದ್ವೀಪದಲ್ಲಿದೆ.
ವಿವೇಕಾನಂದ ಶಿಲಾ ಸ್ಮಾರಕದಲ್ಲಿ, ಪ್ರಧಾನಮಂತ್ರಿಯವರು ಮೊನ್ನೆ ಮೇ 30 ರ ಸಂಜೆ ಧ್ಯಾನವನ್ನು ಪ್ರಾರಂಭಿಸಿದ್ದರು. ಇಂದು ಸಂಜೆ ಸೂರ್ಯಾಸ್ತ ಬಳಿಕ ಪೂರ್ಣಗೊಳಿಸಲಿದ್ದಾರೆ.