ಹುಬ್ಬಳ್ಳಿ: ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕ್ಷಮೆಗೆ ಅರ್ಹರಲ್ಲ.ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಯಲ್ಲಿ ಪ್ರಜ್ವಲ್ ರೇವಣ್ಣ ಕ್ಷಮೆಯಾಚಿಸುತ್ತಿರುವ ಹಿಂದಿನ ಕಾರಣ ಗೊತ್ತಿಲ್ಲ. ಆದರೆ, ಅವರು ಕ್ಷಮೆಗೆ ಅರ್ಹರಲ್ಲ ಎಂದರು. ಪ್ರಜ್ವಲ್ ರೇವಣ್ಣ ಬಂಧನಕ್ಕೂ ಮುನ್ನಾ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಅವರ ಕುಟುಂಬ ಹಾಗೂ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಿದ್ದರು.ಮಹಿಳೆಯರನ್ನು ಬಹಳ ಗೌರವದಿಂದ ಕಾಣುವ ದೇಶದಲ್ಲಿ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಅಸಹ್ಯಕರವಾಗಿದೆ.ಇಲ್ಲಿಯವರೆಗೆ ಪ್ರಜ್ವಲ್ ನಡೆದುಕೊಂಡ ರೀತಿ ಅಕ್ಷಮ್ಯ. ಸಂತ್ರಸ್ತೆಯರಿಂದ ಕ್ಷಮೆಯಾಚಿಸಲಿ ಅಥವಾ ಇಲ್ಲದಿರಲಿ, ಇದು ಗಂಭೀರ ಮತ್ತು ಅಕ್ಷಮ್ಯ ಅಪರಾಧವಾಗಿರುವುದರಿಂದ, ಕಾನೂನಿನ ಪ್ರಕಾರ ಶಿಕ್ಷೆಯನ್ನು ನೀಡಬೇಕು. ಇದು ಬಿಜೆಪಿಯ ಸ್ಪಷ್ಟ ನಿಲುವು ಎಂದು ಜೋಶಿ ಒತ್ತಿ ಹೇಳಿದರು.
ಭಾರತದ ನ್ಯಾಯಾಂಗ ವ್ಯವಸ್ಥೆಯು ಶಕ್ತಿಯುತವಾಗಿದೆ ಮತ್ತು ತನಿಖೆಯನ್ನು ತ್ವರಿತವಾಗಿ ನಡೆಸಬೇಕು. ಪ್ರಜ್ವಲ್‌ಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಜೋಶಿ, ಕಳೆದ ಚುನಾವಣೆಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ. ಈ ಬಾರಿಯೂ ಮತದಾರರು ನನ್ನೊಂದಿಗಿದ್ದು, ಹೆಚ್ಚಿನ ಅಂತರದಿಂದ ಗೆಲುವು ನನ್ನತ್ತ ಬರಲಿದೆ ಎಂದು ಅವರು ಪ್ರತಿಪಾದಿಸಿದರು.