ಕರ್ನಾಟಕ ಸರ್ಕಾರ, ಸಚಿವರುಗಳ ಗುರಿಯಾಗಿಸಿ ಯಾವುದೇ ಆಚರಣೆ ನಡೆಸಿಲ್ಲ: ಕೇರಳ ದೇವಸ್ಥಾನ ಆಡಳಿತ ಮಂಡಳಿ

ಕರ್ನಾಟಕ ಸರ್ಕಾರ, ಸಚಿವರುಗಳ ಗುರಿಯಾಗಿಸಿ ಯಾವುದೇ ಆಚರಣೆ ನಡೆಸಿಲ್ಲ: ಕೇರಳ ದೇವಸ್ಥಾನ ಆಡಳಿತ ಮಂಡಳಿ

Share

ಕೋಝಿಕ್ಕೋಡು: ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ ಒಳಗೊಂಡ “ಶತ್ರು ಭೈರವಿ ಯಾಗ” ನಡೆಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಕಣ್ಣೂರಿನ ತಳಿಪರಂಬದಲ್ಲಿರುವ ಶಿವ ದೇವಾಲಯವಾದ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿದೆ.

ಕೇರಳದ ದೇವಸ್ಥಾನವೊಂದರಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡಿರುವ ಶತ್ರು ಭೈರವಿ ಯಾಗವನ್ನು ಗುರುವಾರ ನಡೆಸಲಾಗಿದೆ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದರು. ತಮ್ಮ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಟಮಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದರು.ಮಲಬಾರ್ ದೇವಸ್ಥಾನ ಮಂಡಳಿ ಸಹಾಯಕ ಕಮಿಷನರ್ ಗಿರೀಶ್ ಕುಮಾರ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇಂತಹ ಆರೋಪಗಳು ಆಧಾರರಹಿತವಾಗಿವೆ. ಈ ಪ್ರದೇಶದಲ್ಲಿ ಯಾವುದೇ ದೇವಾಲಯಗಳು ಅಕ್ರಮ ಆಚರಣೆಗಳಲ್ಲಿ ತೊಡಗುವುದಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಹಾಗೂ ಸಮೀಪದ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳ ಸಮಗ್ರ ವರದಿಯನ್ನು ಸಲ್ಲಿಸಲಾಗಿದೆ. ಈ ವರದಿಯು ಡಿ ಕೆ ಶಿವಕುಮಾರ್ ಅವರು ಮಾಡಿದ ಆರೋಪಗಳನ್ನು ನಿರಾಕರಿಸುವುದಕ್ಕೆ ಸಾಕ್ಷಿಯಾಗಿದೆ, ಈ ದೇವಾಲಯಗಳು ಕಾನೂನುಬದ್ಧ ಮತ್ತು ಸಾಂಪ್ರದಾಯಿಕ ಆಚರಣೆಗಳಿಗೆ ಬದ್ಧವಾಗಿರುವುದನ್ನು ತೋರಿಸುತ್ತವೆ.ಕೇರಳದ ಬಹುತೇಕ ದೇವಾಲಯಗಳಲ್ಲಿ ‘ಶತ್ರು ಸಂಹಾರ’ ಪೂಜೆಯನ್ನು ನಡೆಸಲಾಗುತ್ತಿದ್ದು, ಯಾವುದೇ ಬಲಿದಾನದ ಅಗತ್ಯವಿಲ್ಲದ ಸರಳ ಪೂಜೆಯಾಗಿದೆ, ಇಲ್ಲಿ ಸರಳವಾದ ಮಂತ್ರಗಳ ಪಠಿಸಲಾಗುತ್ತದೆ. ಕಣ್ಣೂರಿನ ತಿರುವರ್ಕಾಡು ಭಗವತಿ ದೇವಸ್ಥಾನ ಅಂದರೆ ಮಡಾಯಿ ಕಾವುನಲ್ಲಿ ಮಾತ್ರ ಜೀವಿಯ ಬಲಿ ನೀಡಲಾಗುತ್ತದೆ. ಇಲ್ಲಿ ಕೋಜಿ ಕಲಶವನ್ನು ನಡೆಸಲಾಗುತ್ತಿದ್ದು, ಇದು ದೇವಿಗೆ ನೀಡುವ ಕೋಳಿ ಬಲಿಯಾಗಿದೆ, ಆದರೆ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆಯಂತೆ ಇಲ್ಲಿ ಯಾವುದೇ ಆಚರಣೆಗಳು ನಡೆಯುವುದಿಲ್ಲ ಎಂದರು.

ಈ ಮಧ್ಯೆ, ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಆಚರಣೆಗಳ ತನಿಖೆಗಾಗಿ ಕರ್ನಾಟಕ ಪೊಲೀಸರ ವಿಶೇಷ ದಳ ನಿನ್ನೆ ಶುಕ್ರವಾರ ಕಣ್ಣೂರಿಗೆ ಹೋಗಿತ್ತು.


Share