ಹೆಣ್ಣು” ಎಂಬ ಎರಡಕ್ಷರದ ಪದಕ್ಕೆ ಈ ಜಗತ್ತಿನಲ್ಲಿ ಎಷ್ಟು ಪ್ರಾಮುಖ್ಯತೆ ಇದೆಯಲ್ಲವೆ.

ಹೆಣ್ಣು” ಎಂಬ ಎರಡಕ್ಷರದ ಪದಕ್ಕೆ ಈ ಜಗತ್ತಿನಲ್ಲಿ ಎಷ್ಟು ಪ್ರಾಮುಖ್ಯತೆ ಇದೆಯಲ್ಲವೆ.

Share

ಈ ಭೂಮಿಯನ್ನು ನಾವು ತಾಯಿಯೆಂದು ಕರೆಯುತ್ತೇವೆ. ಪ್ರಕೃತಿಯನ್ನು ಮಾತೆಯೆಂದು ಗುಣಗಾನ ಮಾಡುತ್ತೇವೆ ಅಂದರೆ ಯಾವುದು ಒಂದು ಜೀವಿಯ ಬದುಕಿಗೆ ಬೇಕಾಗುವ ಆಸರೆ, ಅಕ್ಕರೆ, ನೆರಳು ಮತ್ತು ಹಸಿವನ್ನು ನೀಗಿಸುತ್ತವೆಯೊ ಅವೆಲ್ಲವನ್ನು ಹೆಣ್ಣಿನ ರೂಪಕ್ಕೆ ಹೋಲಿಸುವುದು ಈ ಸಮಾಜದಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ ಅಂದರೆ ಹೆಣ್ಣು ಯಾವತ್ತೂ ಸ್ವಾರ್ಥಿಯಲ್ಲ ಅವಳ ಬದುಕು ಪೂರ್ತಿ ತ್ಯಾಗದಿಂದ ಕೂಡಿರುವುದು. ಒಂದು ಜೀವಿಯು ಭೂಮಿಗೆ ಬರುವ ಮುನ್ನ ತಾಯಿಯ ರೂಪದಲ್ಲಿ ಒಂದು ಹೆಣ್ಣು ನವಮಾಸ ಹೊತ್ತು ಮಾಂಸದ ಮುದ್ದೆಯಾಗಿರುವ ನಮಗೆ ಆಶ್ರಯ ಕೊಟ್ಟು ಸಹಿಸಲಾಗದ ನೋವಿನಲ್ಲೂ ಖುಷಿಯ ಕಂಬನಿ ಹರಿಸಿ ಈ ಜಗಕ್ಕೆ ನಮ್ಮನ್ನು ಪರಿಚಯಿಸುವಳು. ನಂತರ ಒಬ್ಬಳು ಅಕ್ಕನಾಗಿ, ತಂಗಿಯಾಗಿ, ಸ್ನೇಹಿತೆಯಾಗಿ ಬಾಳಿನ ಪ್ರತಿ ಹಂತದಲ್ಲೂ ಗಂಡು ಮಕ್ಕಳ ಮೇಲೆ ಪ್ರಭಾವವನ್ನು ಬೀರುತ್ತಾಳೆ. ಮನೆಯ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು ಎನ್ನುವ ಸುಂದರ ಮಾತಿದೆ. ಮಾತು ನೂರಕ್ಕೆ ನೂರು ಪ್ರತಿಶತ ಸತ್ಯ ಏಕೆಂದರೆ ಒಂದು ಮಗು ಹುಟ್ಟಿದಾಗ ಪ್ರಪಂಚ ಎಂದರೆ ಏನು ಎಂದು ಅರಿಯಲು ಸಾಧ್ಯವಿರುವುದಿಲ್ಲ. ಅಂತಹ ಪರಿಸ್ಥಿತಿಯಿಂದ ಸಮಾಜದಲ್ಲಿ ಒಬ್ಬ ಸಜ್ಜನ ವ್ಯಕ್ತಿಯಾಗಿ ರೂಪುಗೊಳ್ಳಲು ತಾಯಿ ನೀಡುವ ಕೊಡುಗೆ ಅಸಾಮಾನ್ಯವಾದದ್ದು.
ಅಕ್ಕ-ತಂಗಿಯರು ಸಂಬಂಧಗಳ ಮೌಲ್ಯವನ್ನು ತಿಳಿಸಿದರೆ ಸ್ನೇಹಿತೆಯಾಗಿ ರಕ್ತ ಸಂಬಂಧಕ್ಕು ಮೀರಿದ ಭಾಂದವ್ಯಗಳನ್ನು ಧಾರೆ ಎರೆಯುತ್ತಾಳೆ. ಹೆಂಡತಿಯ ರೂಪದಲ್ಲಿ ಎರಡನೇಯ ತಾಯಿಯಾಗುತ್ತಾಳೆ. ಮಗಳ ರೂಪದಲ್ಲಿ ಹೃದಯಕ್ಕೆ ಮುದ್ದು ಮಾಡುತ್ತಾಳೆ. ಹೀಗೆ ಒಂದಲ್ಲ, ಎರಡಲ್ಲ ಒಂದು ಹೆಣ್ಣು ನೂರಾರು ಮುಖಗಳಲ್ಲಿ ಗಂಡಿನ ಬದುಕಿನ ಹಾದಿಯಲ್ಲಿ ಬಂದು ಹೋಗುತ್ತಾಳೆ. ತಾಯಿಯಾಗಿ ಅವಳು ಮಾಡುವ ನಿಸ್ವಾರ್ಥ ಸೇವೆ ಹಾಗೂ ಪ್ರೀತಿಯ ಋಣ ತೀರಿಸಲು ನಾವು ಎಷ್ಟು ಜನ್ಮ ಎತ್ತಿ ಬಂದರು ಕಷ್ಟವೇ ಹೆಂಡತಿಯ ರೂಪದಲ್ಲಿ ಅವಳ ಜೀವನದ ಅರ್ಧ ಆಯುಷ್ಯವನ್ನು ಗುರುತು ಪರಿಚಯವಿರದ ವ್ಯಕ್ತಿಗೆ ನೀಡುವ ಅವಳ ಕೊಡುಗೆ ಕಡಿಮೆಯೇ…? ಒಂದು ಹೆಣ್ಣು ಮನೆಯಲ್ಲಿ ದೃಢವಾಗಿ ಬೆಳೆಯಲು ಅವಕಾಶ ಕೊಟ್ಟರೆ ಅಂತಹ ಹೆಣ್ಣು ತನ್ನ ಮನೆ ಮತ್ತು ಇಡೀ ಸಮಾಜವನ್ನೇ ಶಾಂತಿಯಿಂದ ಬದುಕುವಂತೆ ಮಾಡುವ ಸಾಮಥ್ರ್ಯ ಹೊಂದಿರುತ್ತಾಳೆ.
ಇಂತಹ ಹೆಣ್ಣಿನ ಬಗೆಗೆ ಬರೆಯಲು ಪದಪುಂಜಗಳು ಸಿಗದು ಬದುಕುವ ಪ್ರತಿ ಘಳಿಗೆಯು ಒಂದಲ್ಲ ಒಂದು ರೂಪದಲ್ಲಿ ನಮ್ಮೊಳಗೆ ಭರವಸೆ ತುಂಬುವ, ಪ್ರೀತಿ ನೀಡುವ, ಅಕ್ಕರೆ ಕೊಡುವ, ಗೆದ್ದಾಗ ಖುಷಿ ಪಡುವ ಸೋತಾಗ ಕೈ ಹಿಡಿದು ನಡೆಸುವ ಆ ದೈವರೂಪಕ್ಕೆ ನಾವು ಧನ್ಯತಾ ಭಾವದಿಂದ ಋಣಿಯಾಗಿದ್ದರೆ ಅದೇ ಹೆಣ್ಣಿಗೆ ನಾವು ನೀಡುವ ಅತಿ ದೊಡ್ಡ ಗೌರವ…

ಕನಸಿನ ಭಾರತ ಪತ್ರಿಕೆಯ ಪತ್ರಕರ್ತರು
ಜ್ಯೋತಿ ಬೆಟಗೇರಿ
ಬಾಗಲಕೋಟೆ


Share