ಕರ್ನಾಟಕದಲ್ಲಿ ತಗ್ಗಿದ ಮಳೆ; ಈ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ವರುಣನ ಆರ್ಭಟ

ಕರ್ನಾಟಕದಲ್ಲಿ ತಗ್ಗಿದ ಮಳೆ; ಈ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ವರುಣನ ಆರ್ಭಟ

Share

ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು, ಪ್ರವಾಹ ಮಟ್ಟವೂ ಇಳಿಕೆಯಾಗುತ್ತಿದೆ. ಹೀಗಾಗಿ ನದಿ ತೀರದ ಜನರು ನಿಟ್ಟುಸಿರು ಬಿಡುವಂತಾಗಿದೆ. ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.

ಇಂದು ರಾಜಧಾನಿ ಬೆಂಗಳೂರಿನಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು, ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾದರೆ, ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ. ಜೊತೆಗೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ರಾಜ್ಯದ ಮಲೆನಾಡು ಭಾಗದಲ್ಲಿ ಇಂದು ಕೊಂಚ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಉಡುಪಿ ಜಿಲ್ಲೆಯಾದ್ಯಂತ ಅಧಿಕ ಮಳೆಯಾದರೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ.

ಇನ್ನು, ಉತ್ತರ ಒಳನಾಡಿನಲ್ಲೂ ಸಹ ಸಾಧಾರಣ ಮಳೆಯಾಗಲಿದೆ. ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ನಿರೀಕ್ಷೆ ಇದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮುಂದಿನ ಕೆಲ ದಿನಗಳ ಕಾಲ ದೇಶದ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಯಥೇಚ್ಛ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ದಕ್ಷಿಣ ಗುಜರಾತ್​ ಕರಾವಳಿ ಮತ್ತು ಉತ್ತರ ಕೇರಳ ಕರಾವಳಿಯಲ್ಲಿ ಅಧಿಕ ಮಳೆಯಾಗಲಿದೆ. ಈ ಚಂಡಮಾರುತದ ಪ್ರಭಾವ ಉತ್ತರ ಪಾಕಿಸ್ತಾನ ಮತ್ತು ಪಂಜಾಬ್​ಗೂ ತಟ್ಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಜುಲೈ 30 ರವರೆಗೆ ಭಾರೀ ಮಳೆ ಮುಂದುವರೆಯಲಿದೆ.ಇನ್ನು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲೂ ಜುಲೈ 30ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಜುಲೈ 31ರವರೆಗೆ ವರುಣನ ಆರ್ಭಟ ಇರಲಿದೆ. ಪಶ್ಚಿಮ ಬಂಗಾಳದಲ್ಲಿ ಜುಲೈ 29ರಂದು, ಜಾರ್ಖಂಡ್​​ನಲ್ಲಿ ಜುಲೈ 30ರಂದು, ಛತ್ತೀಸ್​ಗಢದಲ್ಲಿ ಜುಲೈ 30ರಂದು ಮತ್ತು ಪೂರ್ವ ಮಧ್ಯ ಪ್ರದೇಶದಲ್ಲಿ ಜುಲೈ 31ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶ ರಾಜ್ಯಗಳಲ್ಲಿ ಆಗಸ್ಟ್​ 1ರವರೆಗೆ ಯಥೇಚ್ಛವಾಗಿ ಮಳೆ ಸುರಿಯಲಿದೆ. ಜುಲೈ 30ರಿಂದ ಮಳೆಯ ಪ್ರಮಾಣ ಅಧಿಕವಾಗಲಿದೆ. ಪಶ್ಚಿಮ ಮಧ್ಯಪ್ರದೇಶದಲ್ಲಿ ಆಗಸ್ಟ್​ 1ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಆಗಸ್ಟ್​ 1ರವರೆಗೆ ಮಳೆರಾಯನ ಅಬ್ಬರ ಇರಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ


Share