ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ(76) ನಿಧನರಾಗಿದ್ದಾರೆ.
ಕಳೆದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಜಯಂತಿ ಎರಡು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ರಾತ್ರಿ ಈ ಸಮಸ್ಯೆ ಉಲ್ಭಣಗೊಂಡು ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‍ನಲ್ಲಿ ಬೆಳೆದರು.
1968ರಲ್ಲಿ ‘ಜೇನುಗೂಡು’ ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಪ್ರವೇಶಿಸಿದ್ದ ನಟಿ ಜಯಂತಿ ಕನ್ನಡದ ಒಟ್ಟು 190 ಸಿನಿಮಾ ಸೇರಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿನಯ ಶಾರದೆ ಎನಿಸಿಕೊಂಡಿದ್ದರು. ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹೀಗೆ ಆರು ಭಾಷೆ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತಿ ಹೊಂದಿದ್ದರು.
ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಜಯಂತಿ, ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.
ಜಯಂತಿ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ಅಭಿನಯ ಶಾರದೆ ಕಳೆದುಕೊಂಡ ಸ್ಯಾಂಡಲ್‌ವುಡ್‌ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.