ನವದೆಹಲಿ: ಬದುಕುವ ಹಕ್ಕು ಪ್ರಮುಖವಾಗಿದ್ದು, ಕನ್ವರ್ ಯಾತ್ರೆ ಕುರಿತ ನಿಲುವನ್ನು ಮರುಪರಿಶೀಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ಕನ್ವರ್ ಯಾತ್ರೆಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಶಿವನ ಭಕ್ತರು ಗಂಗಾ ನದಿಯ ವಿವಿಧ ಸ್ನಾನಘಟ್ಟಗಳಲ್ಲಿ ಇದೇ 25ರಿಂದ ಆಗಸ್ಟ್ 6ರವರೆಗೆ ಪವಿತ್ರ ಸ್ನಾನ ಮಾಡಲಿದ್ದಾರೆ. ಕೋವಿಡ್ ಸಾಂಕ್ರಾ ಮಿಕದ ಮಧ್ಯೆಯೇ ಕನ್ವರ್ ಯಾತ್ರೆ ನಡೆಸಲು ಈಗಾಗಲೇ ಹಲವು ಭಕ್ತರ ಅಖಾಡಗಳು ಸಿದ್ಧತೆ ನಡೆಸಿವೆ. ಹೀಗಾಗಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ.
ಇದರಂತೆ ನ್ಯಾಯಮೂರ್ತಿಗಳಾದ ಆರ್.ಎಫ್.ನರೀಮನ್ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠವು ವಿಚಾರಣೆ ನಡೆಸಿ, ಬದುಕುವ ಹಕ್ಕು ಪ್ರಮುಖವಾಗಿದ್ದು, ಕನ್ವರ್ ಯಾತ್ರೆ ಕುರಿತ ನಿಲುವನ್ನು ಮರುಪರಿಶೀಲಿಸುವಂತೆ ಹಾಗೂ ಈ ಕುರಿತು ಜು.19ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ನಡೆಸಲು ಭಾರಿ ಸಿದ್ಧತೆ ನಡೆದಿದೆ. ರಾಜ್ಯದಲ್ಲಿರುವ ಗಂಗಾ ಸ್ನಾನಘಟ್ಟಗಳಲ್ಲಿ ಪವಿತ್ರ ಸ್ನಾನ ನಡೆಸಲು ಮತ್ತು ಗಂಗಾ ಜಲ ಕೊಂಡೊಯ್ಯಲು ಬೇಕಾದ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
2021ರ ಮಾರ್ಚ್‌ನಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದರು. ಕೋವಿಡ್ ಮಾರ್ಗಸೂಚಿಯನ್ನು ಕಡೆಗಣಿಸಿದ್ದರು. ಮೇಳದಲ್ಲಿ ಭಾಗವಹಿಸಿದ್ದವರಲ್ಲಿ ಹಲವರಿಗೆ ಕೋವಿಡ್ ತಗುಲಿತ್ತು. ಮೇಳ ನಡೆಸಲು ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಕನ್ವರ್ ಯಾತ್ರೆಗೆ ಉತ್ತರಪ್ರದೇಶ ಸರ್ಕಾರ ಅನುಮತಿ ನೀರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.
ಉತ್ತರಪ್ರದೇಶ ಹಾಗೂ ಹರಿಯಾಣದ ರಾಜ್ಯದ ಶಿವಭಕ್ತರು ಹರಿದ್ವಾರಕ್ಕೆ ಆಗಮಿಸಿ ಗಂಗಾಜಲವನ್ನು ಶ್ರಾವಣದಲ್ಲಿ ತೆಗೆದುಕೊಂಡು ಹೋಗುವುದೇ ಕನ್ವರ್ ಯಾತ್ರೆಯಾಗಿದೆ.